ಕ್ಷೇತ್ರದ 14 ಕೆರೆ ಭರ್ತಿಗೆ ಕ್ರಮ, ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ

28082020 Koppal MLA Raghavendra Hitnal
Published on

22.19 ಕೋಟಿ ರೂ. ಮಂಜೂರು

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿಯಿಂದ ಕೊಪ್ಪಳ ಕ್ಷೇತ್ರದ 14 ಕೆರೆ ತುಂಬಿಸಲು ನೀರಾವರಿ ಇಲಾಖೆ ಅನುಮೋದಿಸಿದ್ದು, 22.19 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕವಲೂರು, ಸಿಂದೋಗಿ, ಹಟ್ಟಿ, ಘಟ್ಟಿರಡ್ಡಿಹಾಳ, ಹಂದ್ರಾಳ, ಕೋಳೂರು ಸೇರಿ 14 ಕೆರೆಗಳನ್ನು ಕಾಲುವೆ ಮೂಲಕ ತುಂಬಿಸಲಾಗುವುದು. ಇದರಿಂದ ರೈತರಿಗೆ ಕುಡಿವ ನೀರು ಹಾಗೂ ಬೋರ್‌ವೆಲ್‌ಗಳು ಮರುಪೂರಣಗೊಳ್ಳಲಿವೆ ಎಂದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದಲ್ಲಿ ಹನಿ ನೀರಾವರಿ ಕಾಮಗಾರಿಗೆ 1100 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಇದರಿಂದ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ. ಬೆಟಗೇರಿ-ಅಳವಂಡಿ ಏತನೀರಾವರಿ ಯೋಜನೆಯಡಿ ಬೆಟಗೇರಿ ಗ್ರಾಮಸ್ಥರಿಗೂ ನೀರು ಕೊಡಲು ಯೋಜಿಸಲಾಗಿದೆ. ಈಗಿರುವ ಕಾಲುವೆಗೆ ಸಬ್‌ಮರ್ಷಿಬಲ್ ಪಂಪ್‌ಗಳನ್ನು ಅಳವಡಿಸಿ ನೀರು ಪೂರೈಸಲು 14ಕೋಟಿ ರೂ.ನಲ್ಲಿ ಯೋಜನೆ ರೂಪಿಸಲಾಗಿದೆ. ಹುಲಿಕೆರೆ ಅಭಿವೃದ್ಧಿಗೆ 13 ಕೋಟಿ ರೂ. ಮಂಜೂರಾತಿಗೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ. ಕೆರೆಗೆ ಸಿಸಿ ಹಾಕಿ ನೀರು ಸಂಗ್ರಹಿಸಲು ಯೋಜಿಸಲಾಗಿದೆ. ಇದರಿಂದ ಕೊಪ್ಪಳ ಹಾಗೂ ಭಾಗ್ಯನಗರಕ್ಕೆ ಶಾಶ್ವತ ಕುಡಿವ ನೀರು ಸಿಗಲಿದೆ. ಹಿರೇಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ 43 ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿ ಆರಂಭವಾಗಲಿದೆ. ಸಚಿವ ಮಾಧುಸ್ವಾಮಿ, ಸಂಸದ ಸಂಗಣ್ಣ ಕರಡಿ ಸೇರಿ ಇತರರು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದ್ದು, ಅನುದಾನ ಬಿಡುಗಡೆಗೆ ಸಹಕರಿಸಿದ್ದಾರೆ ಎಂದರು. ಜಿಪಂ ಸದಸ್ಯ ರಾಜಶೇಖರ್ ಹಿಟ್ನಾಳ್, ಕೂಡಾ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಸದಸ್ಯಅಕ್ಬರ್ ಪಾಷಾ ಇದ್ದರು.

ಕರೊನಾ ಚಿಕಿತ್ಸೆ ಸರಿಯಿಲ್ಲ : ಜಿಲ್ಲೆಯಲ್ಲಿ ಕರೊನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿ ಗಮನಕ್ಕೆ ತರಲಾಗಿದೆ. ವೆಂಟಿಲೇಟರ್‌ಗಳು ಇದ್ದರೂ ಅಳವಡಿಸಿಲ್ಲ. ವೈದ್ಯರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿದೆ. ವೈದ್ಯರ ಹುದ್ದೆಗಳು ಖಾಲಿ ಇವೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಸಾಯುತ್ತಿದ್ದಾರೆ. ಇದೆಲ್ಲದರ ಬಗ್ಗೆಯೂ ಸರ್ಕಾರದ ಗಮನ ಸೆಳೆದಿದ್ದು, ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ. ಜನಪ್ರತಿನಿಧಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಡಿಎಂಎಫ್ ಅನುದಾನ ನೀಡಿದ್ದೇವೆ ಎಂದು ಶಾಸಕ ಹಿಟ್ನಾಳ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net