ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಿರಿ

20012020 Koppal MLA Raghavendra Hitnal
Published on

ಶಾಸಕ ರಾಘವೇಂದ್ರ ಹಿಟ್ನಾಳ್ ಸಲಹೆ | ವಿವಿಧೆಡೆ ಕಾಮಗಾರಿಗಳಿಗೆ ಭೂಮಿ ಪೂಜೆ

ಕೊಪ್ಪಳ: ಸಾರ್ವಜನಿಕರು, ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ತಾಲೂಕಿನ ಚುಕ್ಕನಕಲ್, ಬಹದ್ದೂರಬಂಡಿ, ಹ್ಯಾಟಿ-ಮುಂಡರಗಿ, ಲಾಚನಕೇರಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬಹುದಿನಗಳ ಬೇಡಿಕೆಯಾದ ಬಹದ್ದೂರಬಂಡಿ ಗ್ರಾಮಕ್ಕೆ 24*7 ಕುಡಿವ ನೀರು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕಳೆದ 7 ವರ್ಷಗಳಲ್ಲಿ ಕ್ಷೇತ್ರದ ಬೇಡಿಕೆ ಈಡೇರಿಕೆಗೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಸುಮಾರು 3 ಸಾವಿರ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಕೊಪ್ಪಳ ನಗರದ ವೈದ್ಯಕೀಯ ಕಾಲೇಜು ಬಳಿ ಸಾವಿರ ಹಾಸಿಗೆ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಜನರು ಶಸ್ತ್ರಚಿಕಿತ್ಸೆಗೆ ಬೇರೊಂದು ಜಿಲ್ಲೆಗೆ ಹೋಗಬೇಕಿಲ್ಲ. ಬಹದ್ದೂರಬಂಡಿ ಹತ್ತಿರ 12ಕೋಟಿ ರೂ. ವೆಚ್ಚದಲ್ಲಿ ಕೇಂದ್ರೀಯ ವಿದ್ಯಾಲಯ ಕಾಮಗಾರಿ ಪ್ರಾರಂಭಗೊಂಡಿದೆ. 3 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಿಸಿದರು. ಜಿಪಂ ಸದಸ್ಯರಾದ ಎಸ್.ಬಿ.ನಾಗರಳ್ಳಿ, ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಚುಕನಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕೆಒಎಫ್ ಅಧ್ಯಕ್ಷ ಸುರೇಶ ಮಾದಿನೂರ, ನಗರಸಭಾ ಸದಸ್ಯರಾದ ಅಮ್ಜದ್ ಪಟೇಲ್, ಸಿದ್ದು ಮ್ಯಾಗೇರಿ, ಅಕ್ಬರ ಪಾಷಾ ಪಲ್ಟನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net