

ಕೊಪ್ಪಳ:ಗ್ರಾಮೀಣ ಜನರಿಗೆ ನರೇಗಾ ದೊಡ್ಡ ವರವಾಗಿದೆ. ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನರೇಗಾ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ವರ್ಷದ ಕಾಮಗಾರಿ ಅನುಷ್ಠಾನಕ್ಕೆ ಜನರಿಂದ ಮಾಹಿತಿ ಪಡೆಯಲಾಗುತ್ತಿದೆ. ಕೆಲಸದ ದಿನಗಳ ಬೇಡಿಕೆ ಸಂಗ್ರಹಿಸಲಾಗುತ್ತಿದೆ. ಮನೆ ಮನೆ ಅಭಿಯಾನ ಹಮ್ಮಿಕೊಂಡಿದ್ದು, ಕೂಲಿಕಾರರು ತಮಗೆ ಅವಶ್ಯ ಇರುವ ಕಾಮಗಾರಿ, ಕೂಲಿ ಬೇಡಿಕೆ ಮಾಹಿತಿ ನೀಡಿ.
ನಿಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಿ. ಯಾರೋಬ್ಬರೂ ನರೇಗಾ ಯೋಜನೆಯಿಂದ ಹೊರಗುಳಿಯಬೇಡಿ. ಎಲ್ಲರೂ ಅರ್ಜಿ ಸಲ್ಲಿಸಿ ಯೋಜನೆ ಪಡೆಯಿರಿ. ಅಧಿಕಾರಿಗಳು ನರೇಗಾದಡಿ ಲಭ್ಯ ಇರುವ ವೈಯಕ್ತಿಕ, ಸಾಮುದಾಯಿಕ ಕಾಮಗಾರಿಗಳ ಬಗ್ಗೆ ಜನರಿಗೆ ಸರಯಾದ ಮಾಹಿತಿ ನೀಡಿ ಎಂದು ಸೂಚಿಸಿದರು.
ನರೇಗಾದಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾಯಕ ಬಂಧು ಹಾಗೂ 100 ದಿನ ಕೂಲಿ ಕೆಲಸ ನಿರ್ವಹಿಸಿದ ಕುಟುಂಬಗಳಿಗೆ ನರೇಗಾ ಟೋಪಿ, ಅಂಗಿ ವಿತರಿಸಲಾಯಿತು.
ಗ್ರಾಪಂ ಆವರಣದಲ್ಲಿ ಹೊಸದಾಗಿ ಆರಂಭಿಸಿರುವ ಕೂಸಿನ ಮನೆಯನ್ನು ಶಾಸಕ ಹಿಟ್ನಾಳ್ ಉದ್ಘಾಟಿಸಿದರು. ಮಕ್ಕಳ ಆಟಿಕೆ ಸಾಮಾನು, ಕಲಿಕಾ ಪೂರಕ ಚಿತ್ರಗಳು, ಮೂಲ ಸೌಕರ್ಯ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ತಾಪಂ ಇಒ ದುಂಡಪ್ಪ ತುರಾದಿ, ಗ್ರಾಪಂ ಅಧ್ಯಕ್ಷೆ ಸುಜಾತಾ ಮಾರುತಿ ಹೊಸಪೇಟೆ, ಉಪಾಧ್ಯಕ್ಷ ರಾಜಶೇಖರ ನಿಂಗಪ್ಪ ಬಂಡಿಹಾಳ, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ., ಸಿಡಿಪಿಒ ಜಯಶ್ರೀ ಆರ್., ಪಿಡಿಒ ಕೃಷ್ಣಮೂರ್ತಿ ಹಲಗೇರಿ, ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಇತರರಿದ್ದರು.