

ಕೊಪ್ಪಳ: ರಾಜಭವನ ಎಂಬುದು ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು ಬಿಜೆಪಿ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ರಾಜ್ಯಪಾಲರಿಗೆ ಅಭಿವೃದ್ಧಿ ಬೇಕಿಲ್ಲ. ಬಿಜೆಪಿ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಕೆಲಸ ಬಿಟ್ಟು ಸುಖಾ ಸುಮ್ಮನೆ ಸಿಎಂಗೆ ನೋಟಿಸ್ ನೀಡುತ್ತಿದ್ದಾರೆ. ರಾಭವನದೊಂದಿಗೆ ನಡೆದ ಪತ್ರ ವ್ಯವಹಾರ ಅವರದೇ ಕಚೇರಿಯಿಂದ ಸೋರಿಕೆ ಆಗಿರಬಹುದು. ಅದನ್ನು ತನಿಖೆ ಮಾಡಿಸಲಿ ಎಂದು ಭಾನುವಾರ ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಹೇಳಿದರು.
ರಾಜ್ಯದ ಜನ ಯಾವತ್ತೂ ಬಿಜೆಪಿಗೆ ಬಹುಮತ ನೀಡಿಲ್ಲ. ಅಡ್ಡದಾರಿ ಹಿಡಿದೇ ಅವರು ಅಧಿಕಾರ ಪಡೆದಿದ್ದಾರೆ. ಈಗಲೂ ಅದೇ ಸಂಚು ನಡೆಸಿದ್ದಾರೆ. ಹಿಂದೆ ಮಾಜಿ ಸಿಎಂ ಜೆ.ಎಚ್.ಪಟೇಲರು ಅವರ ಸರ್ಕಾರ ಬೀಳಲಿದೆ ಎಂದು ವಿಪಕ್ಷಗಳು ಟೀಕಿಸಿದ್ದಾಗ ಹೋತ ಕಥೆ ಹೇಳಿದ್ದರು. ಸದ್ಯ ಬಿಜೆಪಿಯವರ ಪರಿಸ್ಥಿತಿ ಹಾಗೇ ಆಗಿದೆ. ಇವರು ಟಗರಿನ ಹಿಂದೆ ಬಿದ್ದಿದ್ದಾರೆಂದು ಹೇಳುವ ಮೂಲಕ ತಮ್ಮ ಸರ್ಕಾರ ಸುಭದ್ರ ಎಂದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೆಲ್ಲವೂ ನಿಜವಾಗಿದೆ. ನಾನು ವಿಧಾನಸಭೆ ಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದರು. ಅದರಂತೆ ನಾನು 43 ಸಾವಿರ ಮತಗಳ ಅಂತರದಲ್ಲಿ ಗೆದ್ದೆ. ಟಿಬಿ ಡ್ಯಾಂ 19ನೇ ಕ್ರಸ್ಟ್ ಗೇಟ್ ಕಿತ್ತಿದಾಗಲೂ ಮತ್ತೆ ಜಲಾಶಯ ಭರ್ತಿಯಾಗಲಿದೆ. ನಾನೇ ಬಾಗಿನ ಅರ್ಪಿಸುವೆ ಎಂದಿದ್ದರು. ಅದರಂತೆ ಇಂದು ಬಾಗಿನ ಅರ್ಪಿಸಿದರು. ಬಿಜೆಪಿ ಆಡಳಿತದಲ್ಲೇ ಕ್ರಸ್ಟ್ ಗೇಟ್ ಬದಲಾವಣೆ ಮಾಡುವಂತೆ ವರದಿ ಬಂದಿದೆ. ಅವರು ಮುಚ್ಚಿಟ್ಟಿದ್ದರು. ನಾವು ಬಂದ ಮೇಲೆ ಚರ್ಚೆ ನಡೆದಿದೆ. ನೆರೆ ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆದು ಅನುಷ್ಠಾನ ಮಾಡುವ ಭರವಸೆ ನೀಡಿದರು.