

ಕೊಪ್ಪಳ: ಮುಂಬರುವ ಮಳೆಗಾಲದವರೆಗೆ ಬರ ನಿರ್ವಹಣೆ ಮಾಡಬೇಕು. ಜನ, ಜಾನುವಾರುಗಳಿಗೆ ಕುಡಿವ ನೀರು, ಮೇವು ಇತ್ಯಾದಿ ಸೌಲಭ್ಯ ಕಲ್ಪಿಸಬೇಕು. ಈಗಿನಿಂದಲೇ ತಯಾರಿ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರ
ಮಳೆ ಕೊರತೆ ಕಾರಣ ನೀರು, ಮೇವಿನ ಅಭಾವ ಆಗಲಿದೆ. ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿ ರೈತರೊಂದಿಗೆ ಮಾತನಾಡಿ ಭತ್ತದ ಹುಲ್ಲು ಸಂಗ್ರಹಿಸಿ. ಹುಲ್ಲು ಸುಡದಂತೆ ತಡೆಯಿರಿ. ಮಳೆಯಾಶ್ರಿತ ಪ್ರದೇಶಕ್ಕೆ ಭತ್ತದ ಹುಲ್ಲು ಕಳಿಸುವ ವ್ಯವಸ್ಥೆ ಮಾಡಿ. ಅಗತ್ಯ ಬಿದ್ದಲ್ಲಿ ಗೋ ಶಾಲೆ ಆರಂಭಕ್ಕೆ ಪ್ರಸ್ತಾವನೆ ಸಿದ್ಧಗೊಳಿಸಿ. ಯಾವುದೇ ಕಾರಣಕ್ಕೂ ಪರಿಹಾರ ಕಾಮಗಾರಿಗಳಿ ವಿಳಂಬ ಆಗಬಾರದು. ನಿಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಎಂದು ತಾಕೀತು ಮಾಡಿದರು.
ಪಶುಪಾಲನ ಇಲಾಖೆ ಡಿಡಿ ಡಾ.ಪಿ.ಮಲ್ಲಯ್ಯ ಮಾತನಾಡಿ, ಜಿಲ್ಲೆಯಲ್ಲಿ 2,72,467 ಜಾನುವಾರುಗಳಿವೆ. 3,99,377.92 ಮೆ.ಟನ್ ಮೇವು ಲಭ್ಯವಿದೆ. ಕುಷ್ಟಗಿ ತಾಲೂಕಿನಲ್ಲಿ 14 ವಾರ ಹಾಗೂ ಬಾಕಿ ತಾಲೂಕುಗಳಲ್ಲಿ 28ವಾರಗಳಿಗೆ ಬೇಕಾಗುವಷ್ಟು ಮೇವಿದೆ ಎಂದು ಮಾಹಿತಿ ನೀಡಿದರು.
ಸಚಿವರು ಮಾತನಾಡಿ, ಸರ್ಕಾರ ಡಿಸಿ ಖಾತೆಗೆ 10.50 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಈ ಮೊದಲು 9.50 ಕೋಟಿ ರೂ. ನೀಡಿದ್ದು, ಸದ್ಯ 20 ಕೋಟಿ ರೂ. ಲಭ್ಯವಿದೆ. ಪ್ರತಿ ತಾಲೂಕಿಗೆ 50 ಲಕ್ಷ ರೂ. ನೀಡಲಾಗಿದೆ. ಕುಡಿವ ನೀರು ಸೇರಿ ತುರ್ತು ಪರಿಹಾರ ಕೆಲಸಗಳಿಗೆ 24 ಗಂಟೆಯಲ್ಲಿ ಸ್ಪಂದಿಸಿ. 143 ಗ್ರಾಮಗಳು ಸಮಸ್ಯೆಗೆ ಒಳಗಾಗಬಹುದೆಂದು ಅಂದಾಜಿಸಲಾಗಿದೆ.
ಅಲ್ಲೆಲ್ಲ ಖಾಸಗಿ ಬೋರ್ವೆಲ್ ಬಅಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಿ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ನೀರು ವ್ಯವಸ್ಥೆ ಸಿದ್ಧವಾಗಿರಲಿ ಎಂದು ಕುಡಿವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶಾಸಕ ರಾಘವೆಂದ್ರ ಹಿಟ್ನಾಳ, ಎಸ್ಪಿ ಯಶೋದ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ಕಾವ್ಯಾರಾಣಿ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಇತರ ಅಧಿಕಾರಿಗಳಿದ್ದರು.
ಅಧಿಕಾರಿ ಅಮಾನತಿಗೆ ಸೂಚನೆ: ಸಭೆಯಲ್ಲಿ ಶಾಸಕ ಹಿಟ್ನಾಳ್ ಜಿಲ್ಲಾ ನಗರ ಯೋಜನಾ ಪ್ರಾಧಿಕಾರದ ಇಇ ತ್ಯಾಗರಾಜ ಅಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಗಮನ ಸೆಳೆದರು. ಕಾಮಗಾರಿ ನಡೆಸದೆ, ಪದೇಪದೆ ಟೆಂಡರ್ ಕರೆಯುತ್ತಾರೆಂದು ಆರೋಪಿಸಿದರು. ಅಧಿಕಾರಿ ಸಭೆಗೆ ಗೈರಾಗಿದ್ದರು. ಸಭೆಯಲ್ಲೇ ಅಧಿಕಾರಿಗೆ ಕರೆ ಮಾಡಿದ ಸಚಿವರು ತರಾಟೆ ತೆಗೆದುಕೊಂಡರು. ಶುಗರ್, ಬಿಪಿ ಕಾರಣ ನೀಡಿ ಗೈರಾಗುವಂತಿಲ್ಲ. ಕುಂಟ ನೆಪ ಒಪ್ಪಲ್ಲ. ಇವು ಸಾಮಾನ್ಯ ಕಾಯಿಲೆಗಳು. ಬೇಜವಾಬ್ದಾರಿ ನಡೆ ಸಹಿಸುವುದಿಲ್ಲವೆಂದು ದಬಾಯಿಸಿದರು. ಅಧಿಕಾರಿ ಅಮಾನತಗೆ ಶಿಾರಸ್ಸು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.