ಪ್ರಾಧಿಕಾರ ರಚಿಸಿ ಅಭಿವೃದ್ಧಿ ಕಾರ್ಯ; ಸಚಿವ ಹಾಲಪ್ಪ ಆಚಾರ್ ಹೇಳಿಕೆ

23102021 Koppal Kittur rani chennama jayanti
Published on

ನಿತ್ಯವೂ ಮಹನೀಯರ ಕೊಡುಗೆ ನೆನೆಯಬೇಕಿದೆ

ಕೊಪ್ಪಳ: ಬ್ರಿಟಿಷರ ವಿರುದ್ಧ ಕಹಳೆ ಊದಿ ಸ್ವಾತಂತ್ರೃದ ಕಲ್ಪನೆ ಬಿತ್ತಿದ ವೀರರಾಣಿ ಚನ್ನಮ್ಮ ಕುರಿತು ಇಂದಿನ ಮಕ್ಕಳು ಹಾಗೂ ಯುವ ಸಮೂಹ ಅರಿಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಚನ್ನಮ್ಮ ಜಯಂತಿ ಜತೆಗೆ ಉತ್ಸವ ಆಚರಿಸುತ್ತಿದೆ. ಪ್ರಾಧಿಕಾರ ರಚಿಸಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಇದೆಲ್ಲದರ ಉದ್ದೇಶ ಇಂದಿನ ವಿದ್ಯಾರ್ಥಿಗಳು, ಯುವಜನಾಂಗ ಇಂಥ ದಿಟ್ಟ ಮಹಿಳೆ ಕುರಿತು ಅರಿಯಲಿ ಎಂಬುದಾಗಿದೆ. ಕೇವಲ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ನಿತ್ಯವೂ ಅವರ ಕೊಡುಗೆ ನೆನೆಯುವಂತಾಗಬೇಕು. ಮಹನೀಯರ ಕುರಿತು ಸಣ್ಣ ಕೈಪಿಡಿ ಮಾಡಿ ಶಾಲಾ ಹಂತದಲ್ಲೇ ಮಕ್ಕಳಿಗೆ ವಿತರಿಸಬೇಕು. ಇದರಿಂದ ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಸ್ವಾತಂತ್ರೃ ಪಡೆದ ಬಗೆ ಮಕ್ಕಳಿಗೆ ತಿಳಿಯಲಿದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಚನ್ನಮ್ಮ. ಅವರಂತೆ ಇಂದಿನ ಯುವತಿಯರಾಗಬೇಕು. ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕೆಳದಿ ಚನ್ನಮ್ಮ ಸೇರಿದಂತೆ ಅನೇಕ ಮಹಿಳೆಯರು ಹೋರಾಡಿದ್ದಾರೆ. ಅಂಥವರ ತ್ಯಾಗದಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಎಲ್ಲ ಸಮುದಾಯದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೆ, ಅವರನ್ನೇ ಆಸ್ತಿ ಮಾಡಿ. ಸಂಘಟನೆ, ಹೋರಾಟ ಮೂಲಕ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದರು.

ಸಾಹಿತಿ ಮಹಾಂತೇಶ ಮಲ್ಲನಗೌಡರ್ ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಪಂ ಸಿಇಒ ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ಎಸ್ಪಿ ಟಿ.ಶ್ರೀಧರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಪಂಚಮಸಾಲಿ ಸಮುದಾಯದ ಮುಖಂಡರಾದ ಬಸಲಿಂಗಪ್ಪ ಭೂತೆ, ಕರಿಯಪ್ಪ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net