

ಕೊಪ್ಪಳ: ನಗರದ 1ನೇ ವಾರ್ಡ್ ಮೆಹಬೂಬ್ ನಗರಕ್ಕೆ ರಸ್ತೆ, ಚರಂಡಿ, ಸ್ವಚ್ಛತೆ ಸೇರಿ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಿವಾಸಿಗಳು ಗುರುವಾರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಆಶ್ರಯ ನಿವೇಶನಗಳಿಗೆ 15 ವರ್ಷದಿಂದ ಸೌಕರ್ಯ ಕಲ್ಪಿಸಿಲ್ಲ. ಮಳೆ ಬಂದರೆ ರಸ್ತೆಯಲ್ಲೆಲ್ಲ ನೀರು ನಿಲ್ಲುತ್ತದೆ. ಓಡಾಡುವುದಕ್ಕೂ ಆಗುವುದಿಲ್ಲ. ಚರಂಡಿ ನಿರ್ಮಿಸಿಲ್ಲ. ಸೊಳ್ಳೆಗಳ ಹಾವಳಿ ಹೆಚ್ಚಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದೇವೆ. ಆದರೂ ಸೌಲಭ್ಯ ಕಲ್ಪಿಸಿಲ್ಲ. ಇನ್ನು ಎಷ್ಟು ವರ್ಷ ಹೀಗೆ ಜೀವನ ಮಾಡಬೇಕು. ನಾವು ಮನುಷ್ಯರು. ನಮಗೂ ಬದುಕುವ ಹಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಸ್ತೆ ನಿರ್ಮಿಸಿ ಡಾಂಬಾರೀಕರಣ ಮಾಡಬೇಕು. ಚರಂಡಿ ನಿರ್ಮಿಸಿ ಮಳೆ ನೀರು ಸುಗಮವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಬೀದಿ ದೀಪ ಅಳವಡಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮುಖ್ಯ ಹಾಗೂ ಒಳ ರಸ್ತೆಗಳನ್ನು ನಿರ್ಮಿಸಿ. ಸೊಳ್ಳೆ ಹಾವಳಿ ತಪ್ಪಿಸಿ. ಮಳೆ ನೀರು ನಿಲ್ಲದಂತೆ ತಗ್ಗುಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಬಳಿಕ ಪೌರಾಯುಕ್ತ ಗಣಪತಿ ಪಾಟೀಲ್ಗೆ ಮನವಿ ಸಲ್ಲಿಸಲಾಯಿತು.
ಶರಣು ಗಡ್ಡಿ, ಶರಣಬಸವ ಪಾಟೀಲ್, ಮಂಗಳೇಶ ರಾಠೋಡ್, ದ್ಯಾಮಣ್ಣ ಡೊಳ್ಳಿನ, ಲಲಿತಮ್ಮ, ಈರಮ್ಮ, ಲಕ್ಷಿ$್ಮ ಜಾಲಗಾರ, ಬಾನು ನೀಲಗಾರ, ದೇವಮ್ಮ, ಉಷಾ ಬಂಡಾರಿ, ಸುಮಾ, ಗೌಸಿಯ, ಸಂಗಮ್ಮ, ತುಳಸಮ್ಮ, ಸ್ವಪ್ನ ಇತರರಿದ್ದರು.