ಕರಕುಶಲ ಕಲೆ ಪ್ರೋತ್ಸಾಹಿಸುವಂತೆ ಕರಕುಶಲ ಕೈಗಾರಿಕಾ ಮೇದಾರ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಆಗ್ರಹ

05012022 Koppal Maydar comunity protest
Published on


ಕೊಪ್ಪಳ: ಕರಕುಶಲ ಕಲೆ ಅವಲಂಬಿಸಿರುವ ನಾವು ಪ್ಲಾಸ್ಟಿಕ್ ಹಾವಳಿಯಿಂದ ನಿರುದ್ಯೋಗಿಗಳಾಗಿದ್ದು, ನಮಗೆ ವಸತಿ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿ ಕರಕುಶಲ ಕೈಗಾರಿಕಾ ಮೇದಾರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕರಕುಶಲ ಕಲೆ ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಾವು ಬಿದಿರಿನಿಂದ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುವ ಸಮುದಾಯದವರು. ಬೀಸಣಿಕೆ, ಬುಟ್ಟಿ, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದೇವೆ. ಆದರೆ, ಪ್ಲಾಸ್ಟಿಕ್ ಬಳಕೆ ಹೆಚ್ಚಿದ ಕಾರಣ, ನಮ್ಮ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಸರ್ಕಾರ ಕೇವಲ ಬಾಯಿ ಮಾತಿನಲ್ಲಿ ಪ್ಲಾಸ್ಟಿಕ್ ನಿರ್ಬಂಧಿಸುವ ಮಾತನಾಡುತ್ತಿದೆ. ಆದರೆ, ಅನುಷ್ಠಾನ ಮಾಡತ್ತಿಲ್ಲ. ಸಣ್ಣ ಸಮುದಾಯವಾದ ಕಾರಣ ರಾಜಕೀಯ ನಾಯಕರು ನಮ್ಮ ಬೇಡಿಕೆ ಪರಿಗಣಿಸುತ್ತಿಲ್ಲವೆಂದು ಅಳಲು ತೋಡಿಕೊಂಡರು.

ಸರ್ಕಾರಿ ಕಚೇರಿಗಳಲ್ಲೇ ಪ್ಲಾಸ್ಟಿಕ್ ವಸ್ತುಗಳ ಬದಲು ಬಿದಿರಿ ವಸ್ತುಗಳನ್ನು ಬಳಸಿದಲ್ಲಿ ನಮಗೆ ಅನುಕೂಲವಾಗುತ್ತದೆ. ಸರ್ಕಾರದಿಂದ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಕೂಡಲೇ ಸರ್ಕಾರ ನಮ್ಮ ಬೇಡಿಕೆ ಪರಿಗಣಿಸಿ ಮನೆ ಮಂಜೂರು ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಕಸದ ಬುಟ್ಟಿ, ಅಲಂಕಾರಿಕ ವಸ್ತುಗಳನ್ನು ಬಳಸುವ ಬದಲು ಪರಿಸರ ಸ್ನೆಹಿ ವಸ್ತುಗಳನ್ನು ಬಳಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ್, ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಕೊತಬಾಳ, ಶಿವಪ್ಪ ಹಡಪದ, ಪರಶುರಾಮ, ಸಂಘದ ಪ್ರಕಾಶ ಮೇದಾರ, ವಿಜಯಲಕ್ಷ್ಮೀ, ಲಕ್ಷ್ಮೀ, ಶೀಲಾ, ದೀಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net