

ಕೊಪ್ಪಳ: ನಗರದ ಹೊರವಲಯದ ಶ್ರೀ ಮಳೆ ಮಲ್ಲೇಶ್ಚರ ರಥೋತ್ಸವ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು, ಉತ್ತತ್ತಿ ಹೂಗಳನ್ನು ಅರ್ಪಿಸಿ ಜಯಘೋಫಿ ಕೂಗಿದರು. ಕೊಪ್ಪಳ ಸೇರಿ ಸುತ್ತಲಿನ ವಿವಿಧ ಗ್ರಾಮದ ಜನರು ದೇವಸ್ಥಾನಕ್ಕೆ ಆಗಮಿಸಿ ಮಳೆ ಮಲ್ಲೇಶ್ವರನ ದರ್ಶನ ಪಡೆದು ಪುನೀತರಾದರು. ಬೆಳಗ್ಗೆ 10.30ಕ್ಕೆ ದೇವಸ್ಥಾನದ ಆವರಣದಲ್ಲಿ 17 ಜೋಡಿ ಸಾಮೂಹಿಕ ವಿವಾಹಗಳು ನೆರವೇರಿದವು. ಬಂದವರಿಗೆಲ್ಲ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಪ್ರಕೃತಿ ಉಳಿಸೋಣ: ರಥೋತ್ಸವ ಬಳಿಕ ಆಶೀರ್ವಚನ ನೀಡಿದ ಗವಿಶ್ರೀ, ನಾವೆಲ್ಲ ಹಿಮಾಲಯ, ಸಹ್ಯಾದ್ರಿ ಪರ್ವತ ನಿರ್ಮಿಸಬೇಕಿಲ್ಲ. ದೇವರು ಮಾಡಿರುವ ಪ್ರಕೃತಿ ಹಾಳು ಮಾಡದಿದ್ದರೆ ಸಾಕು. ಕೈ ಬಲದಿಂದ ಹತ್ತು ಮಂದಿಯನ್ನು ಹೊಡೆಯಬಹುದು. ಆದರೆ, ಕೈಮುಗಿದರೆ ಹತ್ತು ಸಾವಿರ ಜನರನ್ನು ಬದಲಿಸಬಹುದು. ಗಾಂಧೀಜಿ ಒಂದು ಹೆಜ್ಜೆ ಇಟ್ಟರೆ ಸ್ವಾತಂತ್ರ್ಯ ನಿಮಾರ್ಣವಾಯಿತು. ಕೋಗಿಲೆ ಹಾಡಿ ಜಗತ್ತನ್ನು ಸಂತಸ ಪಡಿಸುತ್ತದೆ. ಆದರೆ, ಮನುಫ್ಯಿನಿಗೆ ಅಕ್ಷರ ಕೊಟ್ಟರೆ ಕೆಡಿಸುತ್ತಾನೆ. ಹಾಗಾಗಬಾರದು. ನಮ್ಮಿಂದ ಪರರಿಗೆ ಉಪಯೋಗವಾಗುವಂತೆ ಬಾಳೋಣ ಎಂದರು.