ದಿಢೀರ್ ಸಾರಿಗೆ ಬಸ್ ಸಂಚಾರ ಬಂದ್, ಪ್ರಯಾಣಿಕರ ಪರದಾಟ

11122020 Koppal Bus Strike
Published on

ಕೊಪ್ಪಳ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕರು ಶುಕ್ರವಾರ ದಿಢೀರ್ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದರು. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

ಜಿಲ್ಲೆಯ ಸಾರಿಗೆ ನೌಕರರ ಸಂಘಟನೆಗಳು ಅಧಿಕೃತವಾಗಿ ಯಾವುದೇ ಮುಷ್ಕರಕ್ಕೆ ಕರೆ ನೀಡಿರಲಿಲ್ಲ. ಹೀಗಾಗಿ ಬೆಳಗ್ಗೆ ಎಂದಿನಂತೆ ಬಸ್ ಸಂಚಾರ ಆರಂಭವಾಯಿತು. ಆದರೆ, ಇತರ ಭಾಗಗಲ್ಲಿ ಮುಷ್ಕರದ ಕಾವು ಏರಿದ್ದರಿಂದ ಕೊಪ್ಪಳದಲ್ಲಿ ನಿಲ್ದಾಣಕ್ಕೆ ಬಂದಿದ್ದ ಬಸ್ ಸಂಚಾರ ಆರಂಭಿಸಲಿಲ್ಲ. ಹೀಗಾಗಿ ದೂರದೂರಿನಿಂದ ಬಂದವರು, ಮುಷ್ಕರದ ಬಗ್ಗೆ ಅರಿವಿರದ ಪ್ರಯಾಣಿಕರು ಪರದಾಡುವಂತಾಯಿತು. ವಿವಿಧ ಕೆಲಸಕ್ಕೆ ತೆರಳುವವರು, ಗ್ರಾಮೀಣ ಭಾಗದಿಂದ ಆಸ್ಪತ್ರೆಗೆ ಬಂದವರು ಸೇರಿದಂತೆ ಎಲ್ಲರೂ ಕ್ಷಣಕಾಲ ಪರಿತಪಿಸಿದರು. ಕೆಲ ಗಂಟೆಗಳ ಕಾಲ ನಿಲ್ದಾಣದಲ್ಲೇ ಕುಳಿತು ಸಂಚಾರ ಆರಂಭವಾಗುವುದೆಂದು ಕಾದರು. ಮುಷ್ಕರ ಮುಗಿಯದ ಸೂಚನೆ ದೊರೆತಿದ್ದರಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋದರು.

ಮತ್ತೊಂದೆ ದಿಢೀರ್ ಬೆಳವಣಿಗೆ ಲಾಭ ಪಡದ ಖಾಸಗಿ ವಾಹನದವರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಅನಿವಾರ್ಯವಾದರ ಕಾರಣ ಪ್ರಯಾಣಿಕರು ಗೊಣಗುತ್ತಲೇ ಹೋದರು. ಮತ್ತೊಂದೆಡೆ ಮುಷ್ಕರ ಆರಂಭಿಸಿದ ನೌಕರರು ಬಸ್ ನಿಲ್ದಾಣದಲ್ಲೆ ಅಡುಗೆ ಮಾಡಿಕೊಂಡು ಊಟ ಮಾಡಿದರು. ಸಾರಿಗೆ ನೌಕರರ ಮುಷ್ಕರಕ್ಕೆ ರೈತಪರ ಸಂಘಟನೆ ಮುಖಂಡರು ಬೆಂಬಲ ನೀಡಿ ಮುಷ್ಕರದಲ್ಲಿ ಪಾಲ್ಗೊಂಡರು. ಪ್ರತಿಭಟನಕಾರರಾದ ನಾಗೇಶ ಬಿನ್ನಾಳ, ಅಚಿತ್, ಮಂಜುನಾಥ, ಇಸ್ಮಾಯಿಲ್, ಮಂಜುನಾಥ ಕುಂದುಗೋಳ, ರೈತ ಮುಖಂಡ ಮಹಮ್ಮದ್ ಇಸ್ಮಾಯಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net