ಗುತ್ತಿಗೆ ನೌಕರ ಕೋಟ್ಯಧಿಪತಿ !

koppal lokayukta ride kalakappa nidagundi kridl ex employee
Published on

ಕೊಪ್ಪಳ: ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಗುತ್ತಿಗೆ ನೌಕರ ಕಳಪ್ಪ ಬಂಡಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕೊಟ್ಯಂತರ ರೂ. ಮೌಲ್ಯದ ಆಸ್ತಿಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ.

ಅಪಾರ್ಟಮೆಂಟ್​ ಸೇರಿ 24 ಮನೆ, 20 ನಿವೇಶನ, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್​, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ. ಕೊಪ್ಪಳದ ಪ್ರಗತಿ ನಗರದ ಮನೆ ಹಾಗೂ ಕೆಆರ್​ಐಡಿಎಲ್​ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು. 20 ವರ್ಷದಿಂದ ಕಳಕಪ್ಪ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಇಲಾಖೆಯಲ್ಲಿ 72 ಕೋಟಿ ರೂ. ಅವ್ಯವಹಾರ ನಡೆದ ಪ್ರಕರಣದಲ್ಲಿ ಕೆಲಸದಿಂದ ವಜಾಗೊಂಡಿದ್ದಾನೆ.

ಅಕ್ರಮ ಸಂಬಂಧ ಕೆಆರ್​ಐಡಿಎಲ್​ ಅಧಿಕಾರಿಗಳೇ ನೀಡಿದ ದೂರಿನ ಭಾಗವಾಗಿ ಲೋಕಾಯುಕ್ತ ದಾಳಿ ನಡೆದಿದೆ. ಝಡ್​. ಎಂ.ಚಿಂಚೋಳಿಕರ್​ ಇಇ ಆಗಿದ್ದಾಗ, ಸುಮಾರು ಒಂದು ನೂರು ಕೋಟಿ ರೂ. ಬೋಗಸ್​ ಬಿಲ್​ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆ ತನಖೆ ನಡೆದು ಆರೋಪ ಸಾಬೀತಾಗಿದ್ದು, ಆಗಿನ ಇಇ ಝಡ್​.ಎಂ.ಚಿಂಚೋಳಿಕರ್​, ಹೊರ ಗುತ್ತಿಗೆ ನೌಕರ ಕಳಕಪ್ಪ ಬಂಡಿ ವಜಾಗೊಂಡಿದ್ದಾರೆ. ಇವರಿಬ್ಬರು ಹಾಗೂ ಒಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು ದಾಖಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್​ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್​ ಇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net