ಜಿಲ್ಲಾದ್ಯಂತ ಸರಳವಾಗಿ ರಂಜಾನ್ ಆಚರಣೆ

25052020 Koppal Ramjan Celbration
Published on

ಲಾಕ್‌ಡೌನ್‌ದಿಂದ ಜಿಲ್ಲಾದ್ಯಂತ ತಮ್ಮ ತಮ್ಮ ಮನೆಗಳಲ್ಲಿಯೇ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಕೆ

ಕೊಪ್ಪಳ: ಕರೊನಾ ಕರಿನೆರಳಿನಿಂದಾಗಿ ಪ್ರತಿ ವರ್ಷ ಸಡಗರ, ಸಂಭ್ರಮದಿಂದ ನಡೆಯುತ್ತಿದ್ದ ರಂಜಾನ್ ಹಬ್ಬವನ್ನು ಸೋಮವಾರ ನಗರಾದ್ಯಂತ ಮುಸ್ಲಿಮರು ಸರಳವಾಗಿ ಆಚರಿಸಿದರು.

ಲಾಕ್‌ಡೌನ್ ಇರುವ ಕಾರಣ ಹಬ್ಬದ ವೈಭವ ಸಾರ್ವಜನಿಕವಾಗಿ ಕಂಡುಬರಲಿಲ್ಲ. ಮೊದಲೇ ಧರ್ಮಗುರುಗಳು ಮನೆಯಲ್ಲಿಯೇ ಹಬ್ಬ ಆಚರಣೆಗೆ ಕರೆ ನೀಡಿದ್ದರು. ಮಸೀದಿ, ಈದ್ಗಾ ಮೈದಾನಗಳ ಮುಂದೆ ಸಹ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದಿರುವ ಬಗ್ಗೆ ಬ್ಯಾನರ್ ಹಾಕಿ ಜಾಗೃತಿ ಕೈಗೊಳ್ಳಲಾಯಿತು. ಮನೆಯಲ್ಲಿಯೇ ಹಬ್ಬದ ಅಡುಗೆ ಮಾಡಿ ಪರಸ್ಪರ ಅಂತರ ಕಾಯ್ದುಕೊಂಡೇ ಆಚರಿಸುವುದು ಕಂಡುಬಂತು. ಪೊಲೀಸರು ಹಾಗೂ ನಗರಸಭೆಯಿಂದ ಶನಿವಾರದಿಂದಲೇ ನಿಷೇಧಾಜ್ಞೆ, ಹಬ್ಬ ಆಚರಣೆ ಬಗ್ಗೆ ಅರಿವು ಮೂಡಿಸಲಾಯಿತು. ಮನೆಯಲ್ಲಿಯೇ ನಮಾಜ್ ಸಲ್ಲಿಸಿ, ಅಲ್ಲಾಹುವಿನಲ್ಲಿ ಕರೊನಾ ಆದಷ್ಟು ಬೇಗ ತೊಲಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುವಂತೆ ನಗರದ ಯೂಸೂಫಿಯಾ ಮಸೀದಿಯ ಮೌಲಾನ ಮುಫ್ತಿ ನಜೀರ ಅಹ್ಮದಸಾಬ್ ಕರೆ ನೀಡಿದ್ದರು. ಅದರಂತೆ ಮುಸ್ಲಿಮರೆಲ್ಲ ಮನೆಯಲ್ಲಿ ಪ್ರಾರ್ಥನೆ ನೆರವೇರಿಸಿದರು. ನಗರದ ಮಸೀದಿ ಹಾಗೂ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರಠಾಣೆ ಪಿಐ ಮೌನೇಶ್ವರ ಪಾಟೀಲ್, ಸಿಪಿಐ ರವಿ ಉಕ್ಕುಂದ ಇತರರು ನಗರ ಸಂಚಾರ ನಡೆಸಿ, ಲಾಕ್‌ಡೌನ್ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net