30ವರೆಗೆ ಹುಲಿಗೆಮ್ಮ ದೇವಿ ಭಕ್ತರಿಗಿಲ್ಲ ದರ್ಶನ ಭಾಗ್ಯ

06062020 Koppal Huligi Temple
Published on

ಕೊಪ್ಪಳ: ಸರ್ಕಾರ ಜೂ.8ರಂದು ಸೋಮವಾರದಿಂದ ದೇವಸ್ಥಾನ ತೆರೆಯಲು ಆದೇಶಿಸಿದರೂ, ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಮಾತ್ರ ಭಕ್ತರು ಜೂ.30ವರೆಗೆ ಕಾಯಬೇಕು.

ದೇವಸ್ಥಾನ ‘ಎ’ ವರ್ಗದಲ್ಲಿ ಬರಲಿದ್ದು, ಜಿಲ್ಲೆ ಅಷ್ಟೇ ಅಲ್ಲದೆ, ರಾಜ್ಯ, ಅಂತಾರಾಜ್ಯದಿಂದಲೂ ಸಾವಿರಾರು ಭಕ್ತರು ದೇವಿ ದೇವಸ್ಥಾನಕ್ಕೆ ಆಗಮಿಸುವುದು ವಾಡಿಕೆ. ಕಳೆದ ತಿಂಗಳು ದೇವಿ ಜಾತ್ರೆ ಇದ್ದರೂ ಆಚರಣೆ ಮಾಡಿರಲಿಲ್ಲ. ಪ್ರತಿ ವರ್ಷ ಜಾತ್ರೆಯಂದು ಭಕ್ತರು ತಮ್ಮ ಹರಕೆ ತಿರಿಸುವುದು ವಾಡಿಕೆ. ಜಾತ್ರೆ ಮುಗಿದ ನಂತರ ತಿಂಗಳುಗಟ್ಟಲೇ ಭಕ್ತರ ಆಗಮನ ಇದ್ದೇ ಇರುತ್ತದೆ. ಹೀಗಾಗಿ ಸದ್ಯ ದೇವಸ್ಥಾನ ತೆರದಲ್ಲಿ ಮುಂದಿನ ಒಂದೆರೆಡು ತಿಂಗಳು ಹರಕೆ ತೀರಿಸಲು ಸಾವಿರಾರು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಲಾಕ್‌ಡೌನ್ ಮತ್ತು ಕರೊನಾ ಇರುವ ಕಾರಣ ದೇವಸ್ಥಾನ ತೆರೆದರೂ ಸರ್ಕಾರ ಕೆಲ ಷರತ್ತು ವಿಧಿಸಿದೆ. ಹೀಗಾಗಿ ಅಂತಾರಾಜ್ಯದಿಂದ ಬರುವ ಭಕ್ತರನ್ನು ನಿಯಂತ್ರಿಸುವುದು ಮತ್ತು ಅವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ರಾಜ್ಯವಷ್ಟೆ ಅಲ್ಲದೆ, ಹೊರ ರಾಜ್ಯದ ಭಕ್ತರು ಆಗಮಿಸುವುದರಿಂದ ಸಾಂಕ್ರಾಮಿಕ ರೋಗವಾಗಿರುವ ಕೋವಿಡ್-19 ಹರಡುವ ಭೀತಿಯೂ ಹೆಚ್ಚಿದೆ. ಹೀಗಾಗಿ ಸದ್ಯಕ್ಕೆ ದೇವಸ್ಥಾನ ತೆರೆದು ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಡುವುದು ಸುಲಭದ ಕೆಲಸವಲ್ಲವೆಂದು ದೇವಸ್ಥಾನ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಅಲ್ಲದೆ, ಹುಲಿಗಿ ಗ್ರಾಪಂನಲ್ಲಿ ಸಹ ಜೂ.30ವರೆಗೆ ದೇವಿ ದರ್ಶನಕ್ಕೆ ಅವಕಾಶ ನೀಡದಂತೆ ನಡಾವಳಿ ಮಂಡಿಸಲಾಗಿದೆ. ಆಡಳಿತ ಮಂಡಳಿ ಅಭಿಪ್ರಾಯ ಮತ್ತು ಗ್ರಾಪಂ ಠರಾವು ಉಲ್ಲೇಖದಡಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಜೂ.30ವರೆಗೆ ದೇವಿ ದರ್ಶನ ನಿರ್ಬಂಧಿಸಿ ಆದೇಶಿಸಿದ್ದಾರೆ. ಹೀಗಾಗಿ ಭಕ್ತರು ದೇವಿಯನ್ನು ಕಾಣಲು 30ವರೆಗೆ ಕಾಯಲೇಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net