ಕೊಪ್ಪಳ ಜಿಲ್ಲೆ ಸಂಪೂರ್ಣ ಸ್ತಬ್ಧ

24052020 Koppal Band lock down
Published on

ವ್ಯಾಪಾರ-ವಹಿವಾಟು, ವಾಹನ ಓಡಾಟ ಸ್ಥಗಿತ | ಪ್ರಮುಖ ವೃತ್ತಗಳಲ್ಲಿ ಪೊಲೀಸರ ನಿಯೋಜನೆ

ಕೊಪ್ಪಳ: ನಾಲ್ಕನೇ ಅವಧಿ ಲಾಕ್‌ಡೌನ್ ಮುಂದುವರಿದಿದ್ದು, ನಗರಾದ್ಯಂತ ಭಾನುವಾರ ನೀರವ ಮೌನ ಕಂಡುಬಂತು.
ಕಳೆದೆರಡು ತಿಂಗಳಿಂದ ಲಾಕ್‌ಡೌನ್ ಘೋಷಿಸಿ ಕರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಈವರೆಗೂ ಜಿಲ್ಲೆಯಲ್ಲಿ ಕರೊನಾ ಕಾಣಿಸಿಕೊಳ್ಳದೇ ಹಸಿರು ವಲಯದಲ್ಲಿ ಮುಂದುವರಿದಿತ್ತು. ಆದರೆ, ಹೊರರಾಜ್ಯದಲ್ಲಿದ್ದ ಜಿಲ್ಲೆಯ ಜನ ಮರಳಿ ಬರಲು ಅನುಮತಿ ನೀಡಿದ ಬಳಿಕ ಸಾವಿರಾರು ಜನ ಬಂದಿದ್ದು, ಅವರಲ್ಲಿನ ಮೂವರಿಗೆ ಕರೊನಾ ಪಾಸಿಟಿವ್ ಬಂದಿದೆ. ರಾಜ್ಯದಲ್ಲೂ ಕರೊನಾ ಹರಡುವಿಕೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ಸಂಪೂರ್ಣ ಬಂದ್ ಘೋಷಿಸಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಶನಿವಾರ ಸಂಜೆಯೇ ನಗರಾದ್ಯಂತ ಪ್ರಚಾರ ಕೈಗೊಂಡು ಭಾನುವಾರ ಅಂಗಡಿ, ಮುಂಗಟ್ಟು ತೆರೆಯದಂತೆ ಸೂಚಿಸುವುದು ಕಂಡುಬಂತು.

ಅದರಂತೆ ಅಗತ್ಯ ಸೇವೆ ಹೊರತುಪಡಿಸಿ ಬಹುಪಾಲು ನಗರದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ನಗರ ಪ್ರಮುಖ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಅನಗತ್ಯವಾಗಿ ಓಡಾಡುವವರಿಗೆ ಬೆಳಗ್ಗೆಯೇ ಎಚ್ಚರಿಕೆ ನೀಡಿ ಮನೆಗೆ ಕಳಿಸಿದರು. ಹಾಲು, ಪತ್ರಿಕೆ ಸೇರಿ ಇತರ ಅಗತ್ಯ ಸೇವೆಗಳು ಸಹ ಮಧ್ಯಾಹ್ನದ ನಂತರ ಬಂದ್ ಆದವು. ಭಾಗ್ಯನಗರ, ಕುಷ್ಟಗಿ ರಸ್ತೆ, ಗಂಗಾವತಿ, ಹೊಸಪೇಟೆ, ಗದಗ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಯಿತು. ಪ್ರಮುಖ ಕಡೆ ಪೊಲೀಸರು ಬೀಡು ಬಿಟ್ಟು ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಿದರು. ಬಸ್ ಸಂಚಾರ ಇಲ್ಲದಿದ್ದರಿಂದ ಬಸ್‌ನಿಲ್ದಾಣವೂ ಬಿಕೋ ಎನ್ನುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net