ಸ್ಥಳ ಪರಿಶೀಲನೆ ನಂತರ ಮನೆ ಮನೆಗೆ ನೈಸರ್ಗಿಕ ಅನಿಲ ಪೂರೈಕೆ ಕಾಮಗಾರಿ ಆರಂಭಿಸಲು ಸೂಚಿಸಿದ ಸಂಸದ ಸಂಗಣ್ಣ ಕರಡಿ

130622 Koppal Natural Gas Supply Presentation Program
ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಅನಿಲ ಸರಬರಾಜು ಪ್ರಸ್ತುತಿ ಕಾರ್ಯಕ್ರಮದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು.
Published on

ಕೊಪ್ಪಳ: ಮನೆ ಮನೆಗೆ ನೈಸರ್ಗಿಕ ಅನಿಲ ಪೂರೈಕೆ ಉತ್ತಮ ಕೆಲಸ. ಆದರೆ, ಈ ಬಗ್ಗೆ ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡದೆ ಕಾಮಗಾರಿ ನಡೆಸುವುದು ಸರಿಯಲ್ಲ. ಸ್ಥಳ ಪರಿಶೀಲನೆ ನಂತರ ಕಾಮಗಾರಿ ನಡೆಸಿ ಎಂದು ಸಂಸದ ಸಂಗಣ್ಣ ಕರಡಿ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಅನಿಲ ಸರಬರಾಜು ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಮ್ಮ ಯೋಜನೆ ಸರಿಯಾಗಿದೆ. ಆದರೆ, ಪೈಪ್‌ಲೈಲ್ ಮೂಲಕ ಗ್ಯಾಸ್ ಪೂರೈಕೆ ಸಾಮಾನ್ಯ ವಿಷಯವಲ್ಲ. ಈ ಬಗ್ಗೆ ಜನರು ಹೆದರಿದ್ದಾರೆ. ಅವರ ಸಂಶಯಗಳನ್ನು ನಿವಾರಿಸಬೇಕಾದದ್ದು ಕಾಮಗಾರಿ ನಡೆಸುವವರ ಜವಾಬ್ದಾರಿ. ನೀವು ಸುಮ್ಮನೆ ಪರವಾನಗಿ ಸಿಕ್ಕಿದೆ ಎಂದು ಮನ ಬಂದಂತೆ ಕಾಮಗಾರಿ ನಡೆಸಿದರೆ ಹೇಗೆ ? ನಾನು, ಶಾಸಕ ಹಿಟ್ನಾಳ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಸಭೆ ಸದಸ್ಯರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸುತ್ತೇವೆ. ನಿಮ್ಮ ಕಾರ್ಯವೈಖರಿ ಇಷ್ಟವಾದಲ್ಲಿ ಮುಂದಿನ ಮಾತು ಎಂದು ಖಡಕ್ ಆಗಿ ಹೇಳಿದರು.

ಸಭೆ ಆರಂಭದಲ್ಲಿ ಎಜಿ ಆಂಡ್ ಪಿ ಕಂಪನಿ ಪ್ರತಿನಿಧಿ ಜಗದೀಶ ಪುರ್ಲಿ ನೈಸರ್ಗಿಕ ಅನಿಲ, ಅದರ ಬಳಕೆ, ಅಳವಡಿಕೆ, ಉಪಯೋಗಗಳ ಕುರಿತು ವಿವರಣೆ ನೀಡಿದರು. ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಮಹೇಂದ್ರ ಚೋಪ್ರಾ, ಅಕ್ಬರ್ ಪಾಷಾ ಪಲ್ಟನ್, ರಾಜಶೇಖರ್ ಆಡೂರು, ಚನ್ನಪ್ಪ ಕೋಟ್ಯಾಳ ಮಾತನಾಡಿ, ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಇಷ್ಟು ದೊಡ್ಡ ಯೋಜನೆ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ. ನಗರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿಲ್ಲ. ಕಂಪನಿಯವರು ತಿಳಿಸಿದಂತೆ ನಿಯಮಾನುಸಾರ ಕಾಮಗಾರಿ ನಡೆಸುತ್ತಿಲ್ಲ. ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ಕೆಲಸ ಮಾಡುವವರು ಯಾರು? ನಿರ್ವಹಣೆ ಹೇಗೆ? ಅನಿಲ ಪೈಪ್ ಸೋರಿಕೆ, ಅಗ್ನಿ ಅವಘಡ ಸಂಭವಿಸಿದಲ್ಲಿ ಪರಿಹಾರವೇನೆಂದು ಪ್ರಶ್ನೆ ಎತ್ತಿದರು.

150 ಕೋಟಿ ರೂ. ವಿಮೆ ಸೌಲಭ್ಯವಿದೆ ಎಂದ ಕಂಪನಿ ಅಧಿಕಾರಿಗಳು ಸರಿಯಾದ ಉತ್ತರ ನೀಡಲಿಲ್ಲ. ಗರಂ ಆದ ಸಂಸದ ನಿಮಲ್ಲಿ ಯಾವ ಪ್ರಶ್ನೆಗೂ ಸರಿಯಾದ ಉತ್ತರವಿಲ್ಲ. ನಗರಸಭೆಯಿಂದ ಪರವಾನಗಿ ದೊರೆತಿದೆ ಎಂದು ನನ್ನ ಬಳಿ ಸುಳ್ಳು ಹೇಳಿ ಕೆಲಸ ಆರಂಭಿಸಿದ್ದೀರಿ. ನೀವು ಹೇಳಿದ ನಿಯಮಗಳನ್ನೇ ನೀವೇ ಪಾಲಿಸದಿದ್ದರೆ ಹೇಗೆ ? ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳುತ್ತಿದ್ದೀರಿ. ಇದರ ಬಗ್ಗೆ ಕಾಳಜಿ ವಹಿಸಿ ಕಾಮಗಾರಿ ಯಶಸ್ವಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಹೀಗಿರುವಾಗ ಅರೆ ಬರೆ ಮಾಹಿತಿ ನೀಡಿದರೆ ಹೇಗೆಂದು ಕಿಡಿಕಾರಿದರು. ಈ ಸಂಬಂಧ ಕಂಪನಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಡಿಸಿಗೆ ಸೂಚಿಸಿದರು. ಜಿಲ್ಲಾ ಸಂಖ್ಯಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಎಇಇ ಮಂಜುನಾಥ, ಎಜಿ ಆ್ಯಂಡ್ ಪಿ ಕಂಪನಿ ಪ್ರತಿನಿಧಿಗಳು, ಕೊಪ್ಪಳ ನಗಸಭೆ ಹಾಗೂ ಭಾಗ್ಯನಗರ ಪಪಂ ಸದಸ್ಯರಿದ್ದರು.

ವಿಮೆಯಲ್ಲಿ ನಾನಾ ಬಗೆಗಳಿವೆ. ಅದರ ಬಗ್ಗೆ ಸರಿಯಾದ ಮಾಹಿತಿ ನೀಡಿ. ಎಲ್ಲೆಲ್ಲಿ ಕಾಮಗಾರಿ ನಡೆಸುತ್ತೀರಿ ಅಲ್ಲೆಲ್ಲ ಕೆಲಸ ಮಾಡುವವರ ವಿವರ, ಸಂಪರ್ಕ ಸಂಖ್ಯೆ ಸೇರಿ ಇತರ ಮಾಹಿತಿಯುಳ್ಳ ಬೋರ್ಡ್ ಅಳವಡಿಸಿ. ಸುರಕ್ಷತಾ ಕ್ರಮಗಳು, ಅಗ್ನಿ ಅವಘಡಗಳಾದಲ್ಲಿ ಹೇಗೆ ನಿರ್ವಹಿಸುತ್ತಿರಿ ಎಂದೆಲ್ಲ ನೀವು ಉತ್ತರಿಸಬೇಕು. ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ನೀಡುವ ನಿಮ್ಮ ಅಧಿಕಾರಿಯನ್ನು ಒಂದೆರೆಡು ದಿನದಲ್ಲಿ ಕರೆಯಿಸಿ. ಸರಿಯಾದ ಲಿಖಿತ ಮಾಹಿತಿ ನೀಡಿ. ಜನಪ್ರತಿನಿಧಿಗಳು ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ.| ಎಸ್.ವಿಕಾಸ್ ಕಿಶೋರ್ ಜಿಲ್ಲಾಧಿಕಾರಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net