

ನಾಗರಿಕ ವೇದಿಕೆಯಿಂದ ಸಾಂಕೇತಿಕ ಜಿಲ್ಲಾ ಉತ್ಸವ
ಕೊಪ್ಪಳ: ರಾಯಚೂರಿನಿಂದ ಪ್ರತ್ಯೇಕವಾಗಿ ಕೊಪ್ಪಳ ಜಿಲ್ಲೆ ಅಸ್ತಿತ್ವಕ್ಕೆ ಬಂದು 24 ವರ್ಷಗಳಾಗಿವೆ. ಜಿಲ್ಲೆಯಲ್ಲಿ ಇತಿಹಾಸ ನೆನಪಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ವಕೀಲ ಹನುಮಂತರಾವ್ ಕೆಂಪಳ್ಳಿ ಹೇಳಿದರು.
ನಗರದ ಕಾವ್ಯಾನಂದ ಉದ್ಯಾನದಲ್ಲಿ ಜಿಲ್ಲಾ ನಾಗರಿಕರ ವೇದಿಕೆಯಿಂದ ಮಂಗಳವಾರ ಸಾಂಕೇತಿಕ ಜಿಲ್ಲಾ ಉತ್ಸವದ ಅಂಗವಾಗಿ ಡಾ.ಸಿದ್ದಯ್ಯ ಪುರಾಣಿಕ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪುರಾಣಿಕರ ನೆನಪಿಗಾಗಿ ಡಿಜಿಟಲ್ ಗ್ರಂಥಾಲಯ ಆರಂಭಿಸಬೇಕು. ಜಿಲ್ಲೆ ರಚನೆಯಾದಾಗಿನಿಂದ ನಾಗರಿಕರ ವೇದಿಕೆಯಿಂದ ಉತ್ಸವ ಆಚರಿಸುತ್ತಾ ಬರಲಾಗಿದೆ. ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅದರ ಉದ್ದೇಶವಾಗಿದೆ. ಆದರೆ ಕೋವಿಡ್ ಹಿನ್ನಲೆಯಲ್ಲಿ 2 ವರ್ಷಗಳಿಂದ ಉತ್ಸವ ಆಚರಣೆ ಸಾಧ್ಯವಾಗಿಲ್ಲ ಎಂದರು.
ತಿರುಳುಗನ್ನಡ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ.ಸಾದಿಕ್ ಅಲಿ ಮಾತನಾಡಿ, ಜಿಲ್ಲಾ ಆಡಳಿತ ಭವನದದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ಥಳಿ ನಿರ್ಮಿಸಬೇಕು. ಕಾವ್ಯಾನಂದ ಉದ್ಯಾನ ಅಭಿವೃದ್ಧಿ ಪಡಿಸಬೇಕು ಎಂದರು. ವೇದಿಕೆಯ ಜಿಲ್ಲಾ ಅಧ್ಯಕ್ಷ ಜಿ.ಎಸ್.ಗೋನಾಳ್, ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ತಾಲೂಕು ಅಧ್ಯಕ್ಷ ಮಹೆಬೂಬು ಖಾನ್, ಸಾಹಿತಿ ಉಮೇಶ ಸುರ್ವ, ಪತ್ರಕರ್ತರಾದ ಎಚ್.ಎಸ್.ಹರೀಶ್, ಶಿವಕುಮಾರ್ ಹಿರೇಮಠ, ಹಾಗೂ ರಾಜಸಾಬ್ ತಾಳಕೇರಿ, ಉಮೇಶ್ ಪೂಜಾರ, ಚಿನ್ನಪ್ಪ ಗುಳಗಳಿ, ಅವಿನಾಶ ಮಲ್ಲನಗೌಡರ್, ನಾಗರಾಜ, ರಾಘವೇಂದ್ರ ಗೊಂದಿ ಇತರರಿದ್ದರು.