

ಕೊಪ್ಪಳ: ಉದ್ದಿಮೆದಾರರು, ಕಾರ್ಮಿಕರು ಸೇರಿ ಸಾರ್ವಜನಿಕರು ಕಾರ್ಮಿಕ ಇಲಾಖೆ ಕಾನೂನು ಅರಿಯಿರಿ. ಇದರಿಂದ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲೆಯ ಉದ್ಯಮಿಗಳು, ಗುತ್ತಿಗೆದಾರರು, ಸಂಟಿತ, ಅಸಂಟಿತ ಕಾರ್ಮಿಕ ಸಂಟನೆಗಳ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ, ಕನಿಷ್ಠ ವೇತನ, ವೇತನ ಪಾವತಿ, ಸಮಾನ ವೇತನ, ಉಪಧನ ಪಾವತಿ, ಹೆರಿಗೆ ಭತ್ಯೆ, ಬಾಲಕಾರ್ಮಿಕರ ರಕ್ಷಣಾ ಕಾಯ್ದೆಗಳ ಬಗ್ಗೆ ತಿಳಿಯಿರಿ. ಕಾಯ್ದೆಗಳ ಬಗ್ಗೆ ನಮಗೆ ಜ್ಞಾನವಿದ್ದಲ್ಲಿ ಆಪತ್ಕಾಲದಲ್ಲಿ ಸಹಾಯಕ್ಕೆ ಬರಲಿವೆ. ಜಿಲ್ಲೆಯಲ್ಲಿ ಅಂಬೇಡ್ಕರ ಸಹಾಯಹಸ್ತ ಯೋಜನೆಯಡಿ 6,594, ಇ-ಶ್ರಮ್ ಯೋಜನೆಯಡಿ 2,49,607 ಫಲಾನುಭವಿಗಳು ನೋಂದಣಿಯಾಗಿದ್ದಾರೆ. 2 ಲಕ್ಷ ರೂ. ಅಪಘಾತ ಪರಿಹಾರ ಸೌಲಭ್ಯ ಪಡೆಯಬಹುದು. 2,02,513 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ವಿಜಯನಗರ ಜಿಲ್ಲೆಯ ಕಾರ್ಮಿಕ ಅಧಿಕಾರಿ ಸೂರಪ್ಪ ಮಾತನಾಡಿ, ಕಟ್ಟಡ ಮತ್ತು ಇತರ ನಿಮಾರ್ಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿಯ ನೋಂದಣಿ, ನವೀಕರಣ ಪ್ರಕ್ರಿಯೆ, ಸೌಲಭ್ಯಗಳ ಬಗ್ಗೆ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಯೋಜನೆಗಳ ಕುರಿತು ತಿಳಿಸಿದರು.
ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೇ ಸಹಾಯಕ ನಿರ್ದೇಶಕ ವಿಜಯಕುಮಾರ ಮಾತನಾಡಿ, ಕಾರ್ಖಾನೆಗಳ ಕಾಯ್ದೆ 1948 (ಕಾರ್ಮಿಕರ ಸುರಕ್ಷತೆ), ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸಮನ್ವಯತೆ ಮತ್ತು ವಿಕಲಚೇತನರಿಗೆ ಕಾರ್ಖಾನೆಗಳಲ್ಲಿ ಅವಕಾಶ ಹಾಗೂ ಆಶಾದೀಪ ಯೋಜನೆಗಳ ಕುರಿತು ವಿವರಿಸಿದರು.
ರಾಜ್ಯ ವಿಮಾ ಯೋಜನೆ ವಿಮಾ ವೈದ್ಯಾಧಿಕಾರಿ ಡಾ.ಶ್ರೀನಿವಾಸ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್ ಮಾತನಾಡಿದರು. ಉದ್ಯೋಗದಲ್ಲಿ ಸ್ಥಳಿಯರಿಗೆ ಆದ್ಯತೆ ಮತ್ತು ದುಡಿಮೆ ಅವಧಿ 14 ಗಂಟೆಗಳಿಗೆ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಕಾರ್ಮಿಕ ನಿರೀಕ್ಷಕರಾದ ನಿವೇದಿತಾ, ಅಶೋಕ ಇತರರಿದ್ದರು.