

ಕೊಪ್ಪಳ: ಕೇರಳ ಮಾದರಿಯಲ್ಲಿ ನಮ್ಮ ರಾಜ್ಯ ಸಹ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು- ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಭಾಗ್ಯನಗರ ಪಾನಂಟಿ ಕಲ್ಯಾಣ ಮಂಟಪದಲ್ಲಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ದೇಶದ ನಿರ್ಮಾಪಕರು. ಅವರಿಗೆ ಅತ್ಯುನ್ನತ ಸ್ಥಾನವಿದೆ. ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರು ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನ್ಮ ದಿನವನ್ನು ಇಂದು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ. ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ. ಕೇರಳ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ. ಅದರಂತೆ ರಾಜ್ಯವೂ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು.
ಶಿರಹಟ್ಟಿಯ ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಣ ನೀಡುವ ಪ್ರಮಾಣ ಹೆಚ್ಚಿದೆ. ಆದರೆ, ಜ್ಞಾನ ಕಡಿಮೆಯಾಗುತ್ತಿದೆ. ಕಲಿಯುವ ವಯಸ್ಸಿನಲ್ಲಿ ಸರಿಯಾಗಿ ಕಲಿಯಬೇಕು. ಸಾಧನೆಗೆ ಕಷ್ಟಗಳು ಬರುವುದು ಸಹಜ. ಅವುಗಳನ್ನು ಎದುರಿಸುವ ಧೈರ್ಯ ನೀಡುವುದು ಶಿಕ್ಷಣ ಎಂದು ಅಭಿಪ್ರಾಯಪಟ್ಟರು.
ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯಕುಮಾರ ಬಿ.ಜಿ.ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಸಾಧಕರು, ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಬಿಇಒ ಶಂಕ್ರಯ್ಯ ಟಿ.ಎಸ್., ಕುಸ್ಮಾ ತಾಲೂಕು ಅಧ್ಯಕ್ಷ ಶಾಹೀದಹುಸೇನ ತಹಸೀಲ್ದಾರ್, ಕಾರ್ಯದರ್ಶಿ ನಾಗರಾಜ ಗುಡಿ, ಪತ್ರಕರ್ತ ಸಿರಾಜ್ ಬಿಸರಳ್ಳಿ, ಮಂಜುನಾಥ ದಿವಟರ್, ಪ್ರವಿಣ ರೋಣದ, ಶಿವಪ್ಪ ಶೆಟ್ಟರ್, ರಾಜಾಬ ಇತರರಿದ್ದರು.