

ಕೊಪ್ಪಳ: ಶ್ರೀ ಕೃಷ್ಣನ ಸಂದೇಶಗಳು ಸದಾಕಾಲ ಮನುಷ್ಯಪರ. ಜೀವಪರ ಎಂದು ಶಿಕ್ಷಕ ಮಹೇಶ ಬಳ್ಳಾರಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ನಗರದ ಸಿರಸಪ್ಪಯ್ಯ ಮಠದ ಶ್ರೀ ಕೃಷ್ಣ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣ ಏಕ ಮುಖ ವ್ಯಕ್ತಿಯಲ್ಲ. ಹಲವು ಕರ್ತೃತ್ವ ಶಕ್ತಿಗಳ ಮಹಾ ಸಾಧಕ. ದಾರ್ಶನಿಕ, ಸಮಾಜ ಸುಧಾರಕ, ಚಿಂತಕ, ನಿರ್ವಾಹಕ, ಜ್ಞಾನಿ, ವಿಜ್ಞಾನಿ, ರಾಜತಾಂತ್ರಿಕ. ಸಂಗೀತ ಆರಾಧಕ. ಹಲವು ಕ್ಷೇತ್ರಗಳಲ್ಲಿ ಕೃಷ್ಣ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಅತ್ಯವಶ್ಯ. ಜೀವನದಲ್ಲಿ ಕಷ್ಟ&ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಪ್ರತಿ ಜೀವಿಯಲ್ಲಿ ದೇವರು ನೆಲೆಸಿದ್ದಾನೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕೆಂಬುದನ್ನು ಸಾರಿದ್ದಾರೆ. ಗೋಪಾಲಕನಾಗಿದ್ದ ಕೃಷ್ಣ ಜಗತ್ತಿಗೆ ಆದರ್ಶಪ್ರಾಯ. ಅವರ ಸಂದೇಶ ಎಲ್ಲರ ಬದುಕಿಗೂ ಅನ್ವಯಿಸುತ್ತವೆ ಎಂದರು.
ಸಮುದಾಯ ಮುಖಂಡ ರಮೇಶ್ ನಾಗೇಶನಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ರಾಧಾ&ಕೃಷ್ಣ ವೇಷ ಧರಿಸಿ ಗಮನ ಸೆಳೆದರು. ಸಂಸದ ರಾಜಶೇಖರ ಹಿಟ್ನಾಳ ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಬಾಲ ಕೃಷ್ಣನ ತೊಟ್ಟಿಲು, ಮೂರ್ತಿ ದರ್ಶನ ಪಡೆದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಎಡಿಸಿ ಸಿದ್ರಾಮೇಶ್ವರ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಾಹಿತಿ ಸಾವಿತ್ರಿ ಮುಜುಂದಾರ, ಸಮುದಾಯ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಾಣೇಶ ಪೂಜಾರ, ಹುಲಗಪ್ಪ ವಾಲಿಕಾರ, ಸಂಗಪ್ಪ ಬಾಗಲಿ, ಭೀಮಣ್ಣ ಲೇಬಗೇರಿ, ವೆಂಕಟೇಶ್ ಕಟ್ಟಿಮನಿ, ಕಾಮಾಕ್ಷಿ ವಾಲಿಕಾರ, ಹುಲಿಗಮ್ಮ ವಾಲಿಕಾರ ಸೇರಿ ಇತರರಿದ್ದರು.