

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಡಿಜೆಗೆ ಖರ್ಚು ಮಾಡಬೇಕಿದ್ದ ಲಾಂತರ ರೂ. ಹಣದಲ್ಲಿ ತಮ್ಮೂರಿನ ರಸ್ತೆ ರಿಪೇರಿ ಮಾಡಿಕೊಳ್ಳುವ ಮೂಲಕ ಕಿನ್ನಾಳ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ಮಂಗಳವಾರದಿಂದ ಕಾಮಗಾರಿ ಆರಂಭಿಸಿದ್ದು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಾಚುವಂತೆ ಮಾಡಿದ್ದಾರೆ.
ಕೊಪ್ಪಳದಿಂದ 10 ಕಿ.ಮೀ.ದೂರ ಇರುವ ಕಿನ್ನಾಳ ಗ್ರಾಮ ಆಡಳಿತಾತ್ಮಕ ತೊಂದರೆಗೆ ಸಿಲುಕಿದೆ. ಗ್ರಾಮ ಗಂಗಾವತಿ ವಿಧಾನಸಭೆಗೆ ಒಳಪಡುತ್ತದೆ. ಆದರೆ, ಗ್ರಾಪಂ, ತಾಪಂ ಸೇರಿ ಆಡಳಿತ ಕೊಪ್ಪಳ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಜನಪ್ರತಿನಿಧಿಗಳು ತಾರತಮ್ಯ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಅವರ ಹಾದಿ ಹಿಡಿದಿದ್ದು, ರಸ್ತೆ ರಿಪೇರಿ ಮಾಡುವಂತೆ ಜನರು ಸಲ್ಲಿಸಿದ ಮನವಿ, ಪ್ರತಿಭಟನೆಗಳನ್ನು ಲೆಕ್ಕಿಸದೇ ಅನಾಗರಿಕರಂತೆ ವರ್ತಿಸುತ್ತಿದ್ದಾರೆ.
ಇದರಿಂದ ಬೇಸತ್ತ ಗ್ರಾಮಸ್ಥರು ಗಣೇಶ ಉತ್ಸವದ ಸಂಭ್ರಮದಲ್ಲಿ ರಸ್ತೆ ರಿಪೇರಿಗೆ ಇಳಿದಿದ್ದಾರೆ. ಹಿಂದು ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗದ ಸದಸ್ಯರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಗಣೇಶ ಮೂರ್ತಿ ತುರುವಾಗ ಮತ್ತು ವಿಸರ್ಜಿಸುವಾಗ ಡಿಜೆ ಹಚ್ಚುತ್ತಿದ್ದರು. ಇದಕ್ಕೆ ಲಾಂತರ ರೂ. ವ್ಯಯಿಸಬೇಕಿತ್ತು. ಈ ವರ್ಷ ಡಿಜೆ ಬದಲು ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚಲು ಹಣ ಖರ್ಚು ಮಾಡುತ್ತಿದ್ದಾರೆ.
ಜೆಸಿಬಿ, ಟಿಪ್ಪರ್ ಬಳಸಿ ಮರಂ ತಂದು ಗುಂಡಿಗಳನ್ನು ಮುಚ್ಚಲಾಗುತ್ತಿದೆ. 9 ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ವರ್ಷ ರಸ್ತೆ ಅಭಿವೃದ್ಧಿ ಕೈಗೊಳ್ಳುವ ಮೂಲಕ ವಿಶೇಷ ಆಚರಣೆಗೆ ಮುನ್ನುಡಿ ಬರೆದಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕಿದೆ.