

ಕೊಪ್ಪಳ: ಎಲ್ಲರು ಸ್ವಚ್ಛತೆಗೆ ಆದ್ಯತೆ ನೀಡಿ. ಜತೆಗೆ ನಮ್ಮ ಅಂತರಂಗ ಶುದ್ಧವಾಗಿಟ್ಟುಕೊಳ್ಳುವುದು ಬಹುಮುಖ್ಯ. ಎಲ್ಲರೂ ಈ ನಿಟ್ಟಿನಲ್ಲಿ ಸಂಕಲ್ಪ ಮಾಡೋಣ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇರೆಯವರು ನ್ಯಾಯಕ್ಕಾಗಿ ನ್ಯಾಯಾಲಯುಕ್ಕೆ ಹೋಗುತ್ತಾರೆ. ಆದರೆ, ಕಿನ್ನಾಳ ಸ್ವಚ್ಛತೆಗೆ ನ್ಯಾಯಾಂಗ ಇಲಾಖೆಯೇ ಆಗಮಿಸಿರುವುದು ಗ್ರಾಮಸ್ಥರ ಸುದೈವ. ಸ್ವಚ್ಛತೆ ಎಂಬುದು ಕೇಲವ ಬಾಯಿ ಮಾತಿನಲ್ಲಿ ಇದ್ದರೆ ಸಾಲದು. ಅಂತರಂಗವೂ ಸ್ವಚ್ಛವಾಗಲಿ. ಈ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪ ಮಾಡಬೇಕಿದೆ. ಮನದ ಕಲ್ಮಶ ತೆಗೆದಾಗ ಶುದ್ಧವಾಗುತ್ತದೆ. ಕೆಟ್ಟ ವಿಚಾರ ಕೈ ಬಿಡಬೇಕು. ಸದಾ ಒಳ್ಳೆಯದನ್ನೇ ಬಯಸಬೇಕು. ಕಲ್ಲು ಸುಂದರ ಮೂರ್ತಿಯಾಗಲು ಅದರಲ್ಲಿನ ಅನಗತ್ಯ ಭಾಗ ತೆಗೆಯಬೇಕು. ಅದರಂತೆ ಮನಸ್ಸಿನಲ್ಲಿನ ಅನಗತ್ಯ ವಿಚಾರ ತೆಗೆದಾಗ ಶುದ್ಧತೆ ಬರುತ್ತದೆ ಎಂದರು.
ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಮಾತನಾಡಿ, ಗೊಂಬೆಗೆ ಕಿನ್ನಾಳ ಗ್ರಾಮ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಹಲವು ಕಲಾವಿದರ ಕುಟುಂಬಗಳಿವೆ. ಗ್ರಾಮಕ್ಕೆ ಸರಿಯಾಗಿ ರಸ್ತೆ ಇಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಯುವಕರೇ ಗ್ರಾಮದ ರಸ್ತೆ ಸರಿಮಾಡಿದ್ದು ಗಮನ ಸೆಳೆಯಿತು. ಅಭಿವೃದ್ಧಿಗಾಗಿ ಒಗ್ಗಟ್ಟು ಪ್ರದರ್ಶಿಸಿದ್ದೀರಿ. ಇದೇ ಕಾರಣಕ್ಕೆ ನಿಮ್ಮೂರನ್ನು ದತ್ತು ಪಡೆದಿದ್ದೇವೆ. ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸ್ವಚ್ಛ, ಸುಂದರ ಗ್ರಾಮ ಮಾಡುವ ಸಂಕಲ್ಪ ಇದೆ ಎಂದು ತಿಳಿಸಿದರು.
ನ್ಯಾಯಾಧೀಶರಾದ ಮಹಾಂತೇಶ ಎಸ್. ದರಗದ, ಕುಮಾರ ಡಿ.ಕೆ, ಸರಸ್ವತಿದೇವಿ, ಮಲಕಾರಿ ರಾಮಪ್ಪ ಒಡೆಯರ್, ಆದಿತ್ಯ ಕುಮಾರ, ಭಾಗ್ಯಲಕ್ಷಿ$್ಮ, ರಂಗಸ್ವಾಮಿ, ಹಿರಿಯ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ, ಬೆಳ್ಳಪ್ಪ, ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಗ್ರಾಪಂ ಅಧ್ಯಕ್ಷೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರುಗಪ್ಪ ಡಂಬರ, ಹೆಚ್ಚುವರಿ ಎಸ್ಪಿ ಹೇಮಂತಕುಮಾರ ಇತರರಿದ್ದರು.