ಕಿಮ್ಸ್‌ಗೆ ಕಾಯಂ ನಿರ್ದೇಶಕರ ಭಾಗ್ಯ ಇನ್ನೂ ದೊರೆತಿಲ್ಲ !

Koppal KIMS
ಕೊಪ್ಪಳ ಕಿಮ್ಸ್ ಹೊರನೋಟ.
Published on

ವಿ.ಕೆ. ರವೀಂದ್ರ ಕೊಪ್ಪಳ

ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆರಂಭವಾಗಿ ಏಳು ವರ್ಷಗಳಾದರೂ ಕಾಯಂ ನಿರ್ದೇಶಕರ ಭಾಗ್ಯ ಇನ್ನೂ ದೊರೆತಿಲ್ಲ. ಪ್ರಭಾರ ವಹಿಸಿಕೊಂಡವರಿಗೆ ಬೈಲಾ ಪ್ರಕಾರ 6 ತಿಂಗಳ ಅವಕಾಶವಿದ್ದು, ಅವರನ್ನೂ ನಿಯಮ ಮೀರಿ ಮುಂದುವರಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗ, ಅದರಲ್ಲೂ ಕೊಪ್ಪಳ ಜಿಲ್ಲೆಯನ್ನು ಸರ್ಕಾರ ಸದಾ ನಿರ್ಲಕ್ಷಿಸುತ್ತಿದ್ದು, ಯಾವೊಂದು ಅಭಿವೃದ್ಧಿ ಕಾರ್ಯಗಳಾಗಬೇಕಾದರೂ ಇಲ್ಲಿನ ಜನ ಹೋರಾಟ ಮಾಡಲೇಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ. 2013ರಲ್ಲಿ ಜಿಲ್ಲೆಗೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಂಜೂರಾಗಿದ್ದು, ಕಾರ್ಯನಿರ್ವಹಿಸುತ್ತಿದೆ. ಆದರೆ, ಸರ್ಕಾರ ಕಟ್ಟಡಕ್ಕೆ ತಕ್ಕಂತೆ, ಸಿಬ್ಬಂದಿ ಸೇರಿ ಇತರ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಆರಂಭದ ಮೂರು ವರ್ಷ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮಾನ್ಯತೆ ನೀಡಿರಲಿಲ್ಲ. ಕೊನೆ ಘಳಿಗೆಯಲ್ಲಿ ನ್ಯಾಯಾಲಯದ ಮೊರೆ ಹೋದ ಸರ್ಕಾರ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮಾನ್ಯತೆ ನವೀಕರಿಸಿಕೊಂಡಿದೆ. ಇಷ್ಟಾದರೂ ಸಂಸ್ಥೆಯಲ್ಲಿ ಇನ್ನೂ ಪೂರ್ಣ ಪ್ರಮಾಣ ಮೂಲ ಸೌಕರ್ಯ ಕಲ್ಪಿಸಿದಿರುವುದು ಸರ್ಕಾರದ ದಿವ್ಯ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ.

ಎರಡು ವರ್ಷಗಳ ಹಿಂದೆ ಸರ್ಕಾರ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಖಾಲಿ ಇದ್ದ ನಿರ್ದೇಶಕರ ಹುದ್ದೆ ಭರ್ತಿಗೆ ನೇಮಕಾತಿ ನಡೆಸಿದೆ. ಈ ವೇಳೆ ಕೊಪ್ಪಳ ಸಂಸ್ಥೆಯ ಮಾಜಿ ನಿರ್ದೇಶಕರೊಬ್ಬರು ತಮ್ಮನ್ನು ನಿಯಮ ಬಾಹಿರವಾಗಿ ಅಧಿಕಾರದಿಂದ ಕೆಳಗಿಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗದ ಕಾರಣ ನೇಮಕಾತಿ ಕೈ ಬಿಡಲಾಯಿತು. ಅಲ್ಲಿಂದ ಈವರೆಗೆ ಇಬ್ಬರು ಪ್ರಭಾರ ನಿರ್ದೇಶಕರು ಕಾರ್ಯನಿರ್ವಹಿಸಿದ್ದಾರೆ. ಸಂಸ್ಥೆ ಬೈಲಾ ಪ್ರಕಾರ ಕಾಯಂ ನಿರ್ದೇಶಕರ ಅಧಿಕಾರವಧಿ 4ವರ್ಷ ಎಂದಿದೆ. ಹುದ್ದೆ ಖಾಲಿ ಇದ್ದಲ್ಲಿ, ಬೇರೆಯವರಿಗೆ 6 ತಿಂಗಳವರೆಗೆ ಪ್ರಭಾರವಹಿಸಲು ಅವಕಾಶವಿದೆ. ಆದರೆ, ಕಳೆದ 1.5 ವರ್ಷದಿಂದ ಒಬ್ಬರಿಗೆ ಪ್ರಭಾರ ಮುಂದುವರೆಸಲಾಗಿದೆ. ಪ್ರಭಾರವಹಿಸಿಕೊಂಡವರು ಆಡಳಿತದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳದ ಕಾರಣ ಸಮಸ್ಯೆಗಳು ಮುಂದುವರಿದಿವೆ.

ಆವರಣದಲ್ಲಿ ಸ್ವಚ್ಛತೆ ಇಲ್ಲ
ಕಿಮ್ಸ್ ಸಿಬ್ಬಂದಿ ವಸತಿ ಸಮುಚ್ಛಯ ಸೇರಿ ಇತರೆಡೆ ಸ್ವಚ್ಛತೆ ಇಲ್ಲ.. ಅಕ್ಕಪಕ್ಕದಲ್ಲಿ ಜಾಲಿ ಸೇರಿ ಕಸ ಬೆಳೆದಿದೆ. ವಸತಿ ಸಮುಚ್ಚಯದಲ್ಲಿನ ಪೈಪ್‌ಗಳು ಒಡೆದು, ನೀರು ಹರಿಯುತ್ತಿದೆ. ಬೀದಿ ನಾಯಿಗಳ ಓಡಾಟಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದ ಮಕ್ಕಳನ್ನು ಆಟವಾಡಲು ಹೊರಗೆ ಬಿಡಲು ಸಿಬ್ಬಂದಿ ಕುಟುಂಬದವರು ಹೆದರುತ್ತಿದ್ದಾರೆ.

ಜಿಲ್ಲಾಧಿಕಾರಿ ಪತ್ರ
ಕಿಮ್ಸ್ ಪ್ರಭಾರ ನಿರ್ದೇಶಕ ಡಾ.ವಿಜಯನಾಥ ಇಟಗಿ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದಿರುವ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಂಗಳ ಹಿಂದೆ ಆರೋಗ್ಯ ಇಲಾಖೆಗೆ ಪತ್ರ ಬರೆದು ದೂರು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಸರಿಯಾಗಿ ಜವಾಬ್ದಾರಿ ನಿರ್ವಹಿಸದಿರುವುದು, ಮೂಲ ಸೌಕರ್ಯ ಕಲ್ಪಿಸದಿರುವುದು, ಇಲಾಖೆ ಅನುದಾನ ಬಳಸದೆ, ಡಿಎಂಎಫ್ ಅನುದಾನ ಬಳಕೆ ಮಾಡಿದ್ದಾರೆ. ಹೀಗಾಗಿ ಇವರನ್ನು ಬದಲಾಯಿಸಿ ಬೇರೊಬ್ಬರಿಗೆ ನಿರ್ದೇಶಕ ಹುದ್ದೆ ಪ್ರಭಾರ ನೀಡಿ ಜತೆಗೆ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಇಲಾಖೆಯಿಂದ ಯಾವುದೇ ಕ್ರಮವಾಗಿಲ್ಲ.

ಕಿಮ್ಸ್‌ಗೆ ಕಾಯಂ ನಿರ್ದೇಶಕರ ನೇಮಕ ಹಾಗೂ ಪ್ರಭಾರ ನಿರ್ದೇಶಕರ ವಿರುದ್ಧದ ದೂರಿನ ಬಗ್ಗೆ ದೂರವಾಣಿಯಲ್ಲಿ ಏನೂ ಹೇಳಲಾಗದು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.| ಅನಿಲ್‌ಕುಮಾರ್ ಕೆ.ಟಿ. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net