ಹಿಟ್ಲರ್​ ಆಡಳಿತ ನಿಲ್ಲಿಸಿ:ಸಿವಿಸಿ ಆಗ್ರಹ

koppal kavaloor road protest cv chandrashekhar
Published on

ಕೊಪ್ಪಳ: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕವಲೂರು, ಅಳವಂಡಿ, ಹಂದ್ರಾಳ, ಗುಡಿಗೇರಿ ಹಾಗೂ ಬನ್ನಿಕೊಪ್ಪ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದು ರಾಜಕೀಯ ಪ್ರೇರಿತ ಹಾಗೂ ಹಿಟ್ಲರ್​ ಮಾದರಿ ಆಡಳಿತ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಕಿಡಿ ಕಾರಿದ್ದಾರೆ.

ಮೂಲ ಸೌಕರ್ಯ ಬೇಕು ಎಂದು ಬೇಡಿಕೆ ಇಡುವುದು ತಪ್ಪೇ? ಸುಳ್ಳು ಆಶ್ವಾಸನೆ ಕೊಟ್ಟು ಮತ ಪಡೆಯುವಾಗ ಜನರ ಬೇಡಿಕೆಗಳು ತಮ್ಮ ಕಣ್ಣಿಗೆ ಕಾಣಲಿಲ್ಲವೇ? ಹಿಟ್ಲರ್​ ಆಡಳಿತವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಕಾಂಗ್ರೆಸ್​ ಪಕ್ಷ ಹೊರಟಿದೆಯೇ? ಎಂಬುದನ್ನು ಶಾಸಕರು ಹಾಗೂ ಅವರ ಪಕ್ಷದ ನಾಯಕರು ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಕವಲೂರು ಭಾಗದಲ್ಲಿ ರಸ್ತೆಗಳೇ ಮಾಯವಾಗಿವೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ನಿಷ್ಕ್ರಿಯವಾಗಿದ್ದಾರೆ. ಜನರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ ತಹಸೀಲ್ದಾರ್​ ವಿಠ್ಠಲ್​ ಚೌಗಲಾ ವರ್ಗಾವಣೆ ಆಗಬೇಕು. ಕಾಂಗ್ರೆಸ್​ ಪಕ್ಷದ ನಾಯಕರ ಆದೇಶದಂತೆ ಕೆಲಸ ನಿರ್ವಹಿಸುತ್ತಿರುವ ಅವರಿಗೆ ಕೊಪ್ಪಳದಲ್ಲಿ ಮುಂದುವರೆಯುವ ಯೋಗ್ಯತೆ ಹಾಗೂ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರಾವೇಂದ್ರ ಹಿಟ್ನಾಳ ಒಂದು ವರ್ಷದಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಎಷ್ಟು ರಸ್ತೆಗಳು ರಿಪೇರಿಯಾಗಿವೆ ಎಂಬುದನ್ನು ಬಹಿರಂಗಪಡಿಸಲಿ. ಕೂಡಲೇ ಜನರ ಮೇಲೆ ದಾಖಲಿಸಿದ ಪ್ರಕರಣ ವಾಪಸ್​ ಪಡೆಯಬೇಕು. ಜನರ ಕ್ಷಮೆ ಕೇಳಬೇಕು. ರಸ್ತೆ ರಿಪೇರಿ ಮಾಡಬೇಕು. ನಿಷ್ಕ್ರಿಯ ಆಡಳಿತ ವಿರುದ್ಧ ಜೆಡಿಎಸ್​ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net