ಪ್ರತಿಭಟನಕಾರರ ಮೇಲೆ ಎಫ್ಐಆರ್ ಬಿಜೆಪಿ-ಜೆಡಿಎಸ್ ನಾಯಕರ ಖಂಡನೆ

IMG-20241005-WA0011
Published on

ಕೊಪ್ಪಳ: ತಾಲೂಕಿನ ಕವಲೂರು ಗ್ರಾಮದಲ್ಲಿ ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಡೆಸಿದವರ ಮೇಲೆ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದನ್ನು ಬಿಜೆಪಿ-ಜೆಡಿಎಸ್ ನಾಯಕರು ಖಂಡಿಸಿದ್ದಾರೆ. ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ ನಾಯಕರು ಜನರೊಂದಿಗೆ ತಾವಿರುವುದಾಗಿ ಭರವಸೆ ನೀಡಿದರು. ಪ್ರಕರಣ ಹಿಂಪಡೆಯುವವರೆಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಇತ್ತೀಚೆಗೆ ಕವಲೂರು ಸೇರಿ ಸುತ್ತಲಿನ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ದರು. ಸಂಜೀವಿನಿ ಮಹಿಳಾ ಒಕ್ಕೂಟದ ಸಾವಿರಾರು ಸದಸ್ಯರು ಭಾಗಿಯಾಗಿದ್ದರು. ಗ್ರಾಮಸ್ಥರೆಲ್ಲ ಸಾಥ್ ನೀಡಿದ್ದರು.

ಮನವಿ ಸ್ವೀಕರಿಸಲು ಬಂದಿದ್ದ ತಹಸೀಲ್ದಾರ್ ವಿಠ್ಠಲ‌ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಸೇರಿ ಇತರ ಅಧಿಕಾರಿಗಳು ಆಗಮಿಸಿದ್ದರು‌. ಈ ವೇಳೆ ಜನರು ಗಾಡಿ ಅಡ್ಡಗಟ್ಟಿ ರಸ್ತೆ ರಿಪೇರಿ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರು. ಈ ವೇಳೆ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದಾರೆಂದು ತಹಸೀಲ್ದಾರ್ 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೆಡಿಎಸ್, ಬಿಜೆಪಿ ನಾಯಕರು ಪ್ರಕರಣ ಹಿಂಪಡೆಯಲು ಆಗ್ರಹಿಸಿದ್ದಾರೆ. ವಿಪ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪ್ರದೀಪಗೌಡ ಮಾಲಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net