ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸಲು ಎಲ್ಲರೂ ಬದ್ಧರಾಗೋಣ ಎಂದ ಡಿಡಿಪಿಐ ದೊಡ್ಡ ಬಸಪ್ಪ ನೀರಲಕೇರಿ

Koppal Kannada song singing program
ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡುವ ಪ್ರತಿಜ್ಞಾ ವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು.
Published on

ಕೊಪ್ಪಳ: ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಗುರುವಾರ ಕನ್ನಡ ಕಲರವ ಕೇಳಿ ಬಂದಿತು. ಕನ್ನಡ ರಾಜ್ಯೋತ್ಸವ ಅಂಗವಾಗಿ ಕರೆ ನೀಡಿದ್ದ ಮಾತಾಡ್, ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಅಭಿಯಾನದ ಲಕ್ಷ ಕಂಠಗಳಲ್ಲಿ ಸಾಮೂಹಿಕ ಗೀತ ಗಾಯನ ನಡೆಯಿತು. ಜಿಲ್ಲಾ ಕೇಂದ್ರ ಕೊಪ್ಪಳ ಸಾಹಿತ್ಯ ಭವನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಿಡಿಪಿಐ ದೊಡ್ಡ ಬಸಪ್ಪ ನೀರಲಕೇರಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಎಲ್ಲರೂ ಬದ್ಧರಾಗೋಣ. ಕನ್ನಡದ ಬಗ್ಗೆ ಎಲ್ಲರಿಗೂ ಅಭಿಮಾನ, ಪ್ರಜ್ಞೆ ಮೂಡಿಸಲಾಗುತ್ತಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಕನ್ನಡ ಓದಲು, ಬರೆಯಲು ಕಲಿಯಬೇಕು ಹಾಗೂ ಕನ್ನಡೆತರರಿಗೆ ಕನ್ನಡ ಕಲಿಸಬೇಕು ಎಂದರು.

ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನಗೌಡರ ಮಾತನಾಡಿ, ಕನ್ನಡ ಭಾಷೆ ತನ್ನದೆ ಆದ ಐತಿಹಾಸಿಕ ಪರಂಪರೆ ಹೊಂದಿದೆ. ಗ್ರೀಕ್ ನಾಟಕಗಳಲ್ಲಿ ಕನ್ನಡ ಭಾಷಾ ಲಿಪಿ ಬಳಸಲಾಗಿದೆ. ಕ್ರಿ.ಶ. 450ರ ಹಲ್ಮಿಡಿ ಶಾಸನದಲ್ಲಿ ಕನ್ನಡ ಭಾಷೆಯ ಲಿಪಿ ಬಳಕೆಯಾಗಿದೆ. ಕ್ರಿ.ಶ. 750ರ ಕವಿರಾಜ ಮಾರ್ಗ ಕೃತಿಯಲ್ಲಿ ಕನ್ನಡ ವೈಭವದ ಬಗ್ಗೆ ಉಲ್ಲೇಖವಿದೆ. ಇಂದು ಆ ವೈಭವ ಕಣ್ಮರೆಯಾಗುತ್ತಿದೆ ಎಂದರು.

ಶಿಕ್ಷಣ ಇಲಾಖೆ ಎಚ್.ಎಚ್.ಮೇಟಿ, ನೀಲಕಂಠಪ್ಪ ಕಂಬಳಿ, ಸುಜಾತಾ, ಮುಖಂಡರಾದ ಮಹೇಶ್ ಬಾಬು ಸುರ್ವೆ, ಎಂ.ಬಿ. ಅಳವಂಡಿ, ಉಮೇಶ್ ಬಾಬು ಸುರ್ವೆ, ಸಿ.ಆರ್.ಪಿ. ಬಸವರಾಜ, ಸುರೇಶ್ ಕಂಬಳಿ, ರಾಯಪ್ಪ ಉಂಡಿ ಸೇರಿ ವಿವಿಧ ಶಾಲೆ ವಿದ್ಯಾರ್ಥಿಗಳಿದ್ದರು.

ಗಾಯನ ದುಂದುಭಿ: ಕನ್ನಡದ ಶ್ರೇಷ್ಠತೆ ಸಾರುವ ಕುವೆಂಪುರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಕೆ.ಎಸ್ ನಿಸಾರ್ ಅಹ್ಮದ್‌ರ ‘ಜೋಗದ ಸಿರಿ ಬೆಳಕಿನಲಿ’್ಲ, ಹಂಸಲೇಖರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡನ್ನು ಹನುಮಂತಪ್ಪ ಕುರಿ ಸಂಗಡಿಗರು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಶಿಕ್ಷಣ ಇಲಾಖೆ ಉಪ ಸಂಯೋಜನಾಧಿಕಾರಿ ಪದ್ಮನಾಭಕರಣಂ ಸಂಕಲ್ಪ ಬೋಧಿಸಿದರು.

ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿ
ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಕನ್ನಡ ಮಾತನಾಡುವ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಜ್ಞೆ ಸ್ವೀಕರಿಸಿದರು. ಹೇಮಂತ್ ಹಾಗೂ ಸಂಗಡಿಗರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಉಪ ಅರಣ್ಯಾ ಸಂರಕ್ಷಣಾಧಿಕಾರಿ ಹರ್ಷಕುಮಾರ್, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಪಂ ಡಿಎಸ್ ಶರಣಬಸವರಾಜ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net