ಜಿಂದಾಲ್​ಗೆ ಭೂಮಿ ನೀಡಿಕೆಗೆ ಖಂಡನೆ

Published on

ಕೊಪ್ಪಳ: ರಾಜ್ಯ ಸರ್ಕಾರ 3,677 ಎಕರೆ ಭೂಮಿ ಜಿಂದಾಲ್​ ಕಂಪನಿಗೆ ಕೊಟ್ಟ ಕ್ರಮಕ್ಕೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ. ತಕ್ಷಣ ಭೂಮಿ ವಾಪಸ್​ ಪಡೆಯವಂತೆ ಆಗ್ರಹಿಸಿದೆ.

ರಾಜ್ಯದಲ್ಲಿ ಭೂರಹಿತ ಲಕ್ಷಾಂತರ ಬಡ ಜನರು ಫಾರಂ ನಂ. 50-, 53-, 57ರಡಿ ಅರ್ಜಿ ಸಲ್ಲಿಸಿ ಭೂಮಿ ಹಕ್ಕಿಗಾಗಿ ಹಲವು ದಶಕಗಳಿಂದ ಕಾಯುತ್ತಿದ್ದಾರೆ. ಅಂಥವರನ್ನೆಲ್ಲ ಸರ್ಕಾರ ನಯವಾಗಿ ವಂಚಿಸುತ್ತಿದೆ. ಕಂಪನಿಗಳಿಗೆ ಭೂಮಿ ನೀಡುವುದೇ ಸರ್ಕಾರ ಅಭಿವೃದ್ಧಿ ಎಂದು ಭಾವಿಸಿದಂತಿದೆ. ಈ ಮೂಲಕ ಕಂಪನಿ ಹಿತಾಸಕ್ತಿ ಕಾಯ್ದು ಬಡವರಿಗೆ ಅನ್ಯಾಯ ಮಾಡುತ್ತಿದೆ. ಆಳುವವರು ಜನರಿಂದ ಆಯ್ಕೆಯಾಗಿದ್ದಾರೋ ಅಥವಾ ಕಂಪನಿಗಳು ಕೊಡುವ ಕಮಿಷನ್​ ಮೇಲೆ ಆಯ್ಕೆಯಾಗಿದ್ದಾರೋ ಎಂದು ಜನರಿಗೆ ಉತ್ತರಿಸಲು ಪ್ರಕಟಣೆ ಮೂಕ ಆಗ್ರಹಿಸಿದೆ.

ಅಭಿವೃದ್ಧಿ ಹೆಸರಿನಲ್ಲಿ ಖಾಸಗಿ ಕಂಪನಿಗೆ ಅತಿ ಕಡಿಮೆ ಬೆಲೆಯಲ್ಲಿ ಭೂಮಿ ನೀಡಲಾಗುತ್ತಿದೆ. ಅದರ 10ರಷ್ಟು ಹಣ ನೀಡಿದರೂ ಜನರಿಗೆ ಭೂಮಿ ನೀಡುವುದಿಲ್ಲ. ಸರ್ಕಾರವೇ ಉದ್ಯಮ ನಡೆಸಲಿ. ಹಿಂದಿನ ಸರ್ಕಾರ ಮಠಗಳು, ಕಾರ್ಪೊರೇಟ್​ ಕಂಪನಿಗಳು, ಟ್ರಸ್ಟ್​ಗಳಿಗೆ ಭೂಮಿ ನೀಡುವ ಮೂಲಕ ಜನ ವಿರೋಧಿಯಾಗಿ ನಡೆದುಕೊಂಡಿತ್ತು. ಈಗಿನ ಸರ್ಕಾರವೂ ಅದೇ ಹಾದಿ ಹಿಡಿದಿದೆ. ಬಡ ಜನರ ವಿರೋಧಿ ನಡವಳಿಕೆ ಅನುಸರಿಸುವಲ್ಲಿ ಎಲ್ಲ ಸರ್ಕಾರಗಳೂ ಒಂದೇ ಎಂದು ಸಾಬೀತಾಗಿದೆ.

ರೈತ ವಿರೋಧಿ ನೀತಿ ಕೈ ಬಿಡಬೇಕು. ಬಗರ್​ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕು. ಕೈಗಾರಿಕೆ ಹೆಸರಿನಲ್ಲಿ ಲವತ್ತಾದ ಭೂಮಿ ನೀಡುವುದು ನಿಲ್ಲಿಸಬೇಕು. ಜಿಂದಾಲ್​ಗೆ ನೀಡಿದ ಭೂಮಿ ವಾಪಸ್​ ಪಡೆಯಬೇಕೆಂದು ಸಮಿತಿಯ ಡಿ.ಎಚ್​.ಪೂಜಾರ್​, ಡಿ.ಎಸ್​.ನಿರ್ವಾಣಪ್ಪ, ಕುಮಾರ ಸಮತಳ, ಕರಿಯಪ್ಪ ಗುಡಿಮನಿ, ಮುದುಕಪ್ಪ ಹೊಸಮನಿ, ಬಸವರಾಜ ನರೆಗಲ್​ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net