

ಕೊಪ್ಪಳ: ನಮ್ಮ ನಡೆ ಕೃಷ್ಣೆ ಕಡೆ ಎಂದು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಆಣೆ ತಪ್ಪಿದ್ದಾರೆ. ನಾವು ಕೊಪ್ಪಳ ಏತ ನೀರಾವರಿ ಪೂರ್ಣಗೊಳಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ರೂ. ಕೊಡುವುದಾಗಿ ವಚನಭ್ರಷ್ಟರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ 50ಸಾವಿರ ಕೋಟಿ ರೂ. ನೀಡಿದ್ದಾರೆ. ಅದರಲ್ಲಿ ಕೊಪ್ಪಳ ಏತ ನೀರಾವರಿಗೆ ನಯಾ ಪೈಸೆ ನೀಡಿಲ್ಲ. ಕೃಷ್ಣೆ ಮೇಲಿನ ಆಣೆ ಎಲ್ಲಿ ಹೋಯಿತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್? ನಾವು ಅಧಿಕಾರಕ್ಕೆ ಬಂದಾಗ ಕೊಪ್ಪಳ ಏತ ನೀರಾವರಿಗೆ ಅಡಿಗಲ್ಲು ಹಾಕುವಾಗ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅಡ್ಡಗಲ್ಲು ಎಂದು ಟೀಕಿಸಿದರು. ಸದ್ಯ ನಾವು ಅಧಿಕಾರದಲ್ಲಿದ್ದೇವೆ. ಯೋಜನೆ ಪೂರ್ಣಗೊಳಿಸುತ್ತೇವೆ. ಕುಷ್ಟಗಿಯಲ್ಲಿ ಬದಲಾವಣೆ ಗಾಳಿ ಬೀಸಿದೆ. ನಮ್ಮ ಜನ ಪದೇ ಪದೆ ನಿಮ್ಮ ಮಾತು ನಂಬಿ ಮೋಸ ಹೋಗಲ್ಲ ಎಂದು ಕುಟುಕಿದರು.
ಹೈಕವನ್ನು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ್ದೇವೆ. ಮಂಡಳಿಗೆ ಮೂರು ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೆ ಬದ್ಧರಾಗಿದ್ದೇವೆ. ಕೋವಿಡ್ ಬಂದರೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. ಎಸ್ಸಿ ಎಸ್ಟಿ ಜನರಿಗೆ 75 ಯೂನಿಟ್‌ವರೆಗೆ ವಿದ್ಯುತ್, 100 ಅಂಬೇಡ್ಕರ್ ಹಾಸ್ಟೆಲ್, ಯುವಕರು, ಮಹಿಳಾ ಸಂಘದವರಿಗೆ ಐದು ಲಕ್ಷ ರೂ.ವರೆಗೆ ಸಹಾಯಧನ ನೀಡಿದ್ದೇವೆ. ರೈತರು, ದುಡಿಯುವ ವರ್ಗಗಳಿಗೆ ಆದ್ಯತೆ ನೀಡಿದ್ದೇವೆ. ಇದು ಅಭಿವೃದ್ಧಿ. ಇದೇ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ದೊಡ್ಡನಗೌಡ ಬಳಿ ಹಣವಿಲ್ಲ. ನಿಮ್ಮ ಅಭಿವೃದ್ಧಿಗಾಗಿ ಹಗಲಿರುಳು ಓಡಾಡುವ ಶಕ್ತಿಯಿದೆ. ನೀವು ಆಶೀರ್ವಾದ ಮಾಡಿ. ಕುಷ್ಟಗಿಯಲ್ಲಿ ಕನಕ ಭವನ, ಹನುಮಸಾಗರ, ತಾವರಗೇರಾ ತಾಲೂಕು ಕೇಂದ್ರ ಘೋಷಣೆ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಜಾತಿ, ಹಣ ಬಲದಿಂದ ಗೆಲ್ಲಲು ನೋಡುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನರಪರ ಆಡಳಿತ ನೀಡುತ್ತಿದ್ದಾರೆ. ಎಸ್ಸಿ,ಎಸ್ಟಿ ಮೀಸಲು ಹೆಚ್ಚಿಸಿ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದಾರೆ. ಈ ವಿಷಯವನ್ನು ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ನಮ್ಮ ಕಾರ್ಯಕರ್ತರು ಮುಟ್ಟಿಸಬೇಕು. ರಾಜ್ಯದ ಜನ ಬಿಜೆಪಿ ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಗೆ ಹೋಗಲಿದ್ದಾರೆಂದು ಗುಟುರು ಹಾಕಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ನೀಡದ ಕಾರಣ ಕೊಪ್ಪಳ ಏತ ನೀರಾವರಿ ಯೋಜನೆಗೆ ಹಿನ್ನೆಡೆಯಾಯಿತು. ನಮ್ಮ ಸರ್ಕಾರ ಯೋಜನೆಗೆ ಅನುದಾನ ನೀಡಿದೆ. ಜತೆಗೆ ನವಲಿ ಸಮಾನಾಂತರ ಜಲಾಶಯ, ಅಳವಂಡಿ-ಬೆಟಗೇರಿ ಏತ ನೀರಾವರಿ ಸೇರಿ ಇತರ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ. ಸಮಾನಾಂತರ ಜಲಾಶಯಕ್ಕೆ 13 ಸಾವಿರ ಕೋಟಿ ರೂ. ಬೇಕಿದ್ದು, ಈಗಾಗಲೇ ಒಂದು ಸಾವಿರ ಕೋಟಿ ರೂ. ನೀಡಿದ್ದು, ತೆಲಂಗಾಣ, ಆಂಧ್ರ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಜನ ಸಂಕಲ್ಪ ಯಾತ್ರೆಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲಿದ್ದೇವೆ. ಉತ್ತರ ಕರ್ನಾಟಕವನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಅಧಿಕಾರಕ್ಕೆ ಬರುವ ಹುಚ್ಚುತನ ಕೈ ಬಿಡಬೇಕು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ.| ಹಾಲಪ್ಪ ಆಚಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ.