

ಕೊಪ್ಪಳ: ಬಿಜೆಪಿ ಅವಧಿಯಲ್ಲಿ 5900 ಕೋಟಿ ರೂ. ಸಾಲ ಮಾಡಿದ್ದರಿಂದಲೇ ಸಾರಿಗೆ ಇಲಾಖೆ ನಷ್ಟಕ್ಕೆ ಸಿಲುಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಸೋಮವಾರ ಮಾತನಾಡಿದರು.
ಬಿಜೆಪಿಯವರಿಗೆ ತಿಳುವಳಿಕೆ ಇಲ್ಲ. ಅವರು 5900ಕೋಟಿ ರೂ. ಸಾಲ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಆಡಳಿತದಲ್ಲಿ ಒಂದು ಬಸ್ ಸಹ ಖರೀದಿಸಿಲ್ಲ, ನೇಮಕಾತಿ ಮಾಡಲಿಲ್ಲ.2019ರಿಂದ 23ರವರೆಗೆ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮದಲ್ಲಿ ಒಂದು ಬಸ್ ಖರೀದಿಸಿಲ್ಲ. 2016-23ರವರೆಗೆ 16 ನೌಕರರು ನಿವೃತ್ತರಾಗಿದ್ದಾರೆ. ಆದರೂ ನೇಮಕಾತಿ ಮಾಡಿಕೊಳ್ಳಲಿಲ್ಲವೆಂದು ಬಿಜೆಪಿ ಆರೋಪಗಳಿಗೆ ಟಾಂಗ್ ನೀಡಿದರು.
ನಾವು ಅಧಿಕಾರಕ್ಕೆ ಬಂದ ನಂತರ 6,300 ಬಸ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಈಗಾಗಲೇ 3400 ಬಸ್ ಖರೀದಿಸಲಾಗಿದೆ. ಬಾಕಿ ಖರೀದಿಸಲಾಗುವುದು. 9,000 ಹುದ್ದೆ ಭರ್ತಿ ಪ್ರಕ್ರಿಯೆಗೆ ನಡೆಸುತ್ತಿದ್ದು, 2,500 ಹುದ್ದೆ ನೇಮಕಾತಿ ಮಾಡಲಾಗಿದೆ. ಬಿಜೆಪಿಯವರ ಹತ್ತಿರ ನಾವು ಹೇಳಿಸಿಕೊಳ್ಳುವುದೇನಿಲ್ಲ. ಸಾರಿಗೆ ಇಲಾಖೆಯನ್ನು ದುಸ್ಥಿತಿಗೆ ತಂದು ದಿವಾಳಿ ಮಾಡಿದ್ದಾರೆ. ನಮ್ಮ ವಿರುದ್ಧ ಆರೋಪ ಮಾಡುವರೇ ನಿಜವಾದ ಆರೋಪಿಗಳು ಎಂದು ಕುಟುಕಿದರು.
ಬಾಕಿ ವೇತನ ಕೊಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ನೌಕರರಿಗೆ ಕೊಡುವ ಬಾಕಿ ವೇತನ ಕೊಡಲೆಬೇಕು. ಬಿಜೆಪಿಯವರು ಟ್ವೀಟ್ ಮಾಡಿರುವುದಕ್ಕೆ ಉತ್ತರ ಕೊಟ್ಟಿದಿನಿ. ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡುವ ಬದಲು ನೇರವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಶಕ್ತಿ ಇಲಾಖೆಯಿಂದ ಆದಾಯ ಜಾಸ್ತಿಯಾಗಿದೆ. ಆದರೆ, ಖರ್ಚು ಹೆಚ್ಚಾಗಿದೆ. ಈ ಯೋಜನೆಗೂ ಬಾಕಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಸರ್ಕಾರ ಯಾವುದೇ ತಪ್ಪು ಮಾಡಲ್ಲ ಎಂದು ಹೇಳಿದರು. ಸಂಸದ ಕೆ. ರಾಜಶೇಖರ ಹಿಟ್ನಾಳ ಇದ್ದರು.