

ಕೊಪ್ಪಳ: ಸೀಗೆ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಸನ್ನಿಧಾನಕ್ಕೆ ಗುರುವಾರ ಲಾಂತರ ಭಕ್ತರು ಆಗಮಿಸಿ ದರ್ಶನ ಪಡೆದರು.
ಇತ್ತೀಚೆಗಷ್ಟೇ ದಸರಾ ಉತ್ಸವ ಮುಗಿದಿದ್ದು ಹುಲಿಗಿ ಕ್ಷೇತ್ರ ಭಕ್ತರಿಂದ ತುಂಬಿ ತುಳುಕುತ್ತಿದೆ. ಗುರುವಾರ ಹುಣ್ಣಿಮೆ ಇದ್ದರೆ, ಶುಕ್ರವಾರವೂ ವಾರದ ದಿನವಾದ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಪರಿಣಾಮ ಕೊಪ್ಪಳ, ಹೊಸಪೇಟೆ, ಮುನಿರಾಬಾದ್, ಗಂಗಾವತಿ ಬಸ್ ನಿಲ್ದಾಣಗಳು ಜನ ಜಂಗುಳಿಯಿಂದ ಗಿಜಿಗುಟ್ಟಿದ್ದು ಕಂಡುಬಂತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯದತ್ತ ಆಗಮಿಸಿದರು. ಹುಲಿಗಿ ಕ್ರಾಸ್ನಲ್ಲಿ ಬಸ್ಗಾಗಿ ಜನರು ಗಂಟೆಗಟ್ಟಲೇ ಕಾದು ನಿಂತು ಸುಸ್ತಾದರು. ಬಿಟ್ಟು ಬಿಡದೆ ಸುರಿವ ಮಳೆಯಲ್ಲೂ ದರ್ಶನಕ್ಕೆ ಸರತಿ ನಿಂತಿದ್ದರು. ಹುಣ್ಣಿಮೆ ಕಾರಣ ದೇವಿಗೆ ವಿಶೇಷ ಅಲಂಕಾರ, ಪೂಜೆ, ಅರ್ಚನೆ ನೆರವೇರಿಸಲಾಯಿತು. ಮುಂಜಾವಿನಿಂದ ರಾತ್ರಿವರೆಗೆ ದರ್ಶನಕ್ಕೆ ನಿರಂತರ ವ್ಯವಸ್ಥೆ ಕಲ್ಪಿಸಲಾಯಿತು.