ಶಿಶು ಬದಲಾವಣೆ ಮಾಡಿದರಾ ವೈದ್ಯರು ?

koppal hospital baby change issue mch
Published on

ಕೊಪ್ಪಳ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಬದಲಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ವಾರದ ಹಿಂದೆ ಹೆರಿಗೆಯಾದಾಗ ಹೆಣ್ಣು ಮಗು ಎಂದಿದ್ದ ವೈದ್ಯರು ಇಂದು ಸತ್ತ ಗಂಡು ಶಿಶು ನೀಡಿದ್ದಾರೆಂದು ಹೆತ್ತವರು ಆಸ್ಪತ್ರೆ ಸಿಬ್ಬಂದಿ ಹತ್ತಿರ ಜಗಳವಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ನಿವಾಸಿ ಗೌರಿ ಎಂಬ ಮಹಿಳೆ ತೋರಿಸಿಕೊಳ್ಳಲು ಹಗರಿಬೊಮ್ಮನಳ್ಳಿ ಆಸ್ಪತ್ರೆಗೆ ತೆರಳಿದ್ದಾರೆ. ಆರೋಗ್ಯ ಗಂಭೀರವಾಗಿದ್ದು ಕೊಪ್ಪಳಕ್ಕೆ ಕಳುಹಿಸಿದ್ದಾರೆ. ಗಂಭೀರ ಪ್ರಕರಣ ನಿರ್ವಹಿಸಿದ ವೈದ್ಯರು ಸೆ.23ರಂದು ಹೆರಿಗೆ ಮಾಡಿಸಿದ್ದಾರೆ. ಶಿಶು ತೂಕ 1.7 ಕೆಜಿ ಇದ್ದ ಕಾರಣ ಶಿಶು ವಿಭಾಗದ ತೀವ್ರ ನಿಗಾ ಟಕದಲ್ಲಿರಿಸಿದ್ದಾರೆ. ಆಗ ಹೆಣ್ಣು ಮಗು ಜನಿಸಿರುವುದಾಗಿ ಮಹಿಳೆ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಒಂದು ವಾರ ಚಿಕಿತ್ಸೆ ನೀಡಿದ ಬಳಿಕ ಸೆ.30ರ ರಾತ್ರಿ ವೇಳೆ ಶಿಶು ಆರೋಗ್ಯ ಗಂಭೀರವಾಗಿರುವ ಬಗ್ಗೆ ತಾಯಿಗೆ ಮಾಹಿತಿ ನೀಡಿದ್ದಾರೆ. ಆಗಲೂ ನೀಡಿದ ಚೀಟಿಯಲ್ಲಿ ಹೆಣ್ಣು ಶಿಶು ಎಂದೇ ನಮೂದಿಸಲಾಗಿದೆ. ಆದರೆ, ಮಂಗಳವಾರ ಬೆಳಗ್ಗೆ ಶಿಶು ಸತ್ತ ಬಗ್ಗೆ ತಿಳಿಸಿದ್ದಾರೆ. ಕುಟುಂಬದವರು ಅಂತಿಮವಾಗಿ ಮಗು ಮುಖ ನೋಡಲೆಂದು ಮೈಗೆ ಸುತ್ತಿದ್ದ ಬಟ್ಟೆ ಬಿಚ್ಚಿದಾಗ ಗಂಡು ಶಿಶು ಇರುವುದು ಗೊತ್ತಾಗಿದೆ. ತಕ್ಷಣವೇ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯೊಂದಿಗೆ ತಮ್ಮದು ಹೆಣ್ಣು ಶಿಶು ಎಂದು ಕೇಳಿದ್ದಾರೆ. ವೈದ್ಯರು ಗಂಡು ಶಿಶು ಎಂದು ವಾದ ಮಾಡಿದರು.

ಮಗು ಬದಲಾಯಿಸಿದ್ದಾರೆಂದು ಆರೋಪಿಸಿದ ಗೌರಿ ಹಾಗೂ ಕುಟುಂಬದವರು ಕಣ್ಣೀರು ಹಾಕಿ ವೈದ್ಯರ ಬಳಿ ಮಗು ನೀಡುವಂತೆ ಮನವಿ ಮಾಡಿದರು. ಗದ್ದಲವಾಗಿದ್ದರಿಂದ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು. ಕಿಮ್ಸ್​ ಪ್ರಭಾರ ನಿರ್ದೇಶಕ ಡಾ.ವೇಣುಗೋಪಾಲ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಾ ಓಂಕಾರ ಹಾಗೂ ಇತರರು ಆಗಮಿಸಿ ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದರು. ಮಗುವಿನ ಪಾಲಕರು ಡಿಎನ್​ಎ ಪರೀೆ ಮಾಡಿಸುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net