ಕೊಪ್ಪಳ ಜಿಲ್ಲೆಯಲ್ಲಿ ಅಬ್ಬರ ಮುಂದುವರಿಸಿದ ವರುಣ: ಎರಡೇ ದಿನಕ್ಕೆ ಭರ್ತಿಯಾದ ಹಿರೇಹಳ್ಳ ಜಲಾಶಯ, ಅಧಿಕಾರಿಗಳ ನಿರ್ಲಕ್ಷೃದಿಂದ ಬೆಳೆಹಾನಿ

20052022 Koppal Hirehalla Dam full
Published on



ಕೊಪ್ಪಳ: ಜಿಲ್ಲಾದ್ಯಂತ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ಭರ್ತಿಯಾದ ಕಾರಣ ಹಳ್ಳಕ್ಕೆ ನೀರು ಬಿಟ್ಟಿದ್ದು, ಜಮೀನುಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ.

ಜಲಾಶಯ 2.5 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಎರಡೇ ದಿನದಲ್ಲಿ ಭರ್ತಿಯಾಗಿದೆ. ಜಲಾಶಯದಿಂದ ತುಂಗಭದ್ರಾ ನದಿವರೆಗೆ 24 ಕಿಮೀ ಹಳ್ಳ ಹರಿಯುತ್ತದೆ. ಅಕ್ಕ-ಪಕ್ಕದ ಗ್ರಾಮಗಳಿಗೆ ಅನುಕೂಲವಾಗಲೆಂದು 5 ಕಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಕಳೆದೊಂದು ವಾರದಿಂದ ಆಗಾಗ ಮಳೆಯಾಗುತ್ತಿದ್ದು, ಜಲಾಶಯ ಭರ್ತಿಯಾಗುವ ಬಗ್ಗೆ ಗುರುವಾರವಷ್ಟೇ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಶ್ರುಕವಾರ ಬೆಳಗ್ಗೆ ಜಲಾಶಯದ ನಾಲ್ಕು ಗೇಟ್‌ಗಳನ್ನು ತೆರೆದು ಹಳ್ಳಕ್ಕೆ ನೀರು ಬಿಟ್ಟಿದ್ದಾರೆ. ಆದರೆ, ಅಲ್ಲಲ್ಲಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಗೇಟ್ ತೆರೆದಿಲ್ಲ. ಪರಿಣಾಮ ಇವು ತುಂಬಿಕೊಂಡು ಎರಡು ಬದಿ ಒಡ್ಡು ಒಡೆದು ಹೊಲಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಜನರು ಪರದಾಡುವಂತಾಗಿದೆ. ಹಳ್ಳದ ಅಕ್ಕಪಕ್ಕದಲ್ಲಿ ಅಳವಡಿಸಿದ್ದ ಹತ್ತಾರು ಪಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ. ಮಂಗಳಾಪುರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಹತ್ತಿ, ಕಬ್ಬು ಸೇರಿ ಇತರ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

ಕಳೆದ ವರ್ಷ ಸಹ ಕೋಳೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದ ಕಾರಣ ಒಡ್ಡು ಒಡೆದು ಹೊಲಗಳಿಗೆ ನೀರು ನುಗ್ಗಿತ್ತು. ವರ್ಷವಾದರೂ ಮರು ನಿರ್ಮಾಣ ಮಾಡಿಲ್ಲ. ಈ ವರ್ಷವೂ ಅಧಿಕಾರಿಗಳ ನಿರ್ಲಕ್ಷೃದಿಂದ ಹಿರೇಹಳ್ಳ ಒಡ್ಡು ಹೊಡೆದು ರೈತರ ಬೆಳೆಹಾನಿ ಉಂಟಾಗಿದೆ. ಜಮೀನು ಮಾಲೀಕರು ಹೊಲ ಹಾಳಾದ ಬಗ್ಗೆ ಚಿಂತೆಗೀಡಾಗಿದ್ದರೆ, ಜನರು ನೀರಿನೊಂದಿಗೆ ಹರಿದು ಬಂದ ಮೀನುಗಳನ್ನು ಹಿಡಿಯಲು ಓಡಾಡಿದ್ದು ಕಂಡುಬಂತು. ರಸ್ತೆಗೆ ನೀರು ಹರಿದಿದ್ದು, ಕಲ್ಮಲಾ-ಶಿಗ್ಗಾಂವ್ ರಾಜ್ಯ ಹೆದ್ದಾರಿಯಲ್ಲಿ ಕೆಲ ಗಂಟೆ ಸಂಚಾರ ಅಡಚಣೆ ಉಂಟಾಯಿತು. ಮಾದಿನೂರಿನಿಂದ ಕಿನ್ನಾಳ ಸಂಪರ್ಕಿಸುವ ರಸ್ತೆಗೂ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಇಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲವೆಂದು ಜನರು ಅಳಲು ತೋಡಿಕೊಂಡರು.

ಶಾಲಾ-ಕಾಲೇಜಿಗೆ ರಜೆ : ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಯಿತು. ಬೆಳಗ್ಗೆ 8.32ಕ್ಕೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ರಜೆ ಆದೇಶ ಹೊರಡಿಸಿದರು. ಈ ವೇಳೆಗಾಗಲೇ ಕೆಲ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತ ಶಾಲಾ-ಕಾಲೇಜಿಗೆ ತೆರಳಿದ್ದರು. ಆದೇಶ ಬಂದ ಬಳಿಕ ಮತ್ತೆ ಮಳೆಯಲ್ಲೇ ಮನೆಗೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net