ನುಗ್ಗಿದ ಮಳೆ ನೀರಿನಿಂದ ಬಿತ್ತನೆ ಪ್ರದೇಶ ಹಾಳು

Koppal rain
ಹಾಲವರ್ತಿಯಲ್ಲಿ ರೈತ ಈರಣ್ಣ ಅವರ ಜಮೀನಿನಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಬಿತ್ತನೆ ಹಾಳಾಗಿರುವುದು.
Published on

ಕೊಪ್ಪಳ: ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಹಳ್ಳದ ಹರಿವನ್ನು ಬಿಎಸ್‌ಪಿಎಲ್ ಕಂಪನಿ ಮುಚ್ಚಿದ ಕಾರಣ ಮಳೆ ನೀರೆಲ್ಲ ರೈತರ ಜಮೀನಿಗೆ ನುಗ್ಗಿ ಬಿತ್ತನೆ ಪ್ರದೇಶ ಹಾಳಾಗಿದೆ.

ಗ್ರಾಮಕ್ಕೆ ಹೊಂದಿಕೊಂಡು ಬಿಎಸ್‌ಪಿಎಲ್ ಕಂಪನಿ ಆರಂಭವಾಗುತ್ತಿದೆ. ತಮ್ಮ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಂಡಿದ್ದು ಈ ಮೊದಲಿದ್ದ ಹಳ್ಳವನ್ನು ಮುಚ್ಚಿದ್ದಾರೆ. ತಡೆಗೋಡೆ ಒಳ ಭಾಗದ ನೀರು ರೈತರ ಜಮೀನು ಕಡೆಗೆ ಹರಿದು ಹೋಗುವಂತೆ ಪೈಪ್ ಅಳವಡಿಸಲಾಗಿದೆ. ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಹಳ್ಳದ ಮೂಲಕ ಮುಂದೆ ಹರಿದು ಹೋಗಬೇಕಿದ್ದ ನೀರು ರೈತರ ಜಮೀನಿಗೆ ನುಗ್ಗಿದೆ. ಮಳೆ ಹಿನ್ನೆಲೆ ಶನಿವಾರ ಬೆಳಗ್ಗೆಯಷ್ಟೇ ಸುಮಾರು 20-25ಕ್ಕೂ ಹೆಚ್ಚು ರೈತರು 50-60 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ರಾತ್ರಿ ಅಪಾರ ನೀರು ಹೊಲಗಳಿಗೆ ನುಗ್ಗಿದ್ದರಿಂದ ಬೀಜ ಸಮೇತ ಮಣ್ಣು ಕೊಚ್ಚಿಕೊಂಡು ಹೋಗಿದೆ.

ಕೋಳಿ ಾರ್ಮ್ ಇದ್ದು ಅದರಲ್ಲೂ ನೀರು ಹೊಕ್ಕಿದೆ. ರಾಸುಗಳಿಗೆ ಬೆಳೆದ ಮೇವಿನ ಗದ್ದೆಗೂ ನೀರು ನುಗ್ಗಿದೆ. ಬೋರ್‌ವೆಲ್‌ಗಳಿಗೂ ನೀರು ನುಗ್ಗಿದ್ದು ಪಂಪ್ ಒಳಕ್ಕೆ ಕುಸಿದಿದೆ. ಕೇಸಿಂಗ್ ಪೈಪ್‌ಸಹ ಕುಸಿತ ಕಂಡಿದ್ದು ರೈತರು ಕಂಗಾಲಾಗಿದ್ದಾರೆ. ಕಂಪನಿಯವರು ಕಾಮಗಾರಿ ನಡೆಸುವಾಗಲೇ ನೀರು ಹರಿದು ಹೋಗಲು ದೊಡ್ಡ ಕಾಲುವೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೂ, ಅಧಿಕಾರಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಮೊದಲಿದ್ದ ಹಳ್ಳದ ಹರಿವು ಮುಚ್ಚಿದ್ದಾರೆ. ಚಿಕ್ಕದಾದ ಪೈಪ್ ಹಾಕಿದ್ದಾರೆ. ತಡೆಗೋಡೆ ಒಳ ಭಾಗದಲ್ಲಿ ಎತ್ತರಕ್ಕೆ ಮಣ್ಣು ಹಾಕಿದ್ದು ನೀರಿನ ರಭಸಕ್ಕೆ ಕುಸಿದಿದೆ. ಕಾಂಪೌಂಡ್‌ಗೆ ಹೊಂದಿಕೊಂಡು ನೀರು ಹರಿಯಲು ಬಿಟ್ಟಿದ್ದಾರೆ.

ತಡೆಗೋಡೆ ಕುಸಿದು ಕಂಪನಿ ಒಳ ಭಾಗದ ನೀರು ನಮ್ಮ ಹೊಲಕ್ಕೆ ಬಂದಿದೆ. ಸುಮಾರು 1.5 ಅಡಿಯಷ್ಟು ನೀರು ಜಮೀನಿನಲ್ಲಿ ಸಂಗ್ರಹಗೊಂಡಿದೆ. ಎಕರೆಗೆ 40 ಸಾವಿರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಮೆಣಸಿನಕಾಯಿ ಅಗಿ ಹಚ್ಚಿದ್ದು 15 ದಿನಗಳಾಗಿವೆ. ನೀರಿನಲ್ಲಿ ಬೆಳೆ ಮುಳುಗಿದ್ದರಿಂದ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಕಂಪನಿ ಅಧಿಕಾರ ಪ್ರವೀಣ ಆಗಮಿಸಿ ರೈತರಿಗೆ ಆದ ನಷ್ಟ ವೀಕ್ಷಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದರು. ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಅವರು ಆಗಮಿಸಿ ಹಾನಿ ಪರಿಶೀಲಿಸಿದರು.

ತಾಲೂಕು ಆಡಳಿತಕ್ಕೆ ವರದಿ ಮಾಡುವುದಾಗಿ ತಿಳಿಸಿದರು. ರೈತರಾದ ಕೀರಪ್ಪ, ಗವಿಸಿದ್ದಪ್ಪ ರಡ್ಡೇರ, ಮಂಜುನಾಥ ಅಜ್ಜಿ, ಶರಣಪ್ಪ ರಡ್ಡೇರ, ಈರಣ್ಣ ರಡ್ಡೇರ, ನಿಂಗಪ್ಪ ರಡ್ಡೇರ ಇತರರಿದ್ದರು.

ಹಾಲವರ್ತಿಯಲ್ಲಿ ರೈತ ಈರಣ್ಣ ಅವರ ಜಮೀನಿನಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಬಿತ್ತನೆ ಹಾಳಾಗಿರುವುದು.
ಹಾಲವರ್ತಿಯಲ್ಲಿ ರೈತ ಈರಣ್ಣ ಅವರ ಜಮೀನಿನಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಬಿತ್ತನೆ ಹಾಳಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net