

ಕೊಪ್ಪಳ: ತಿಂಗಳಿಂದ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪ್ರಹಸನಕ್ಕೆ ಡಿ.30ರ ಬುಧವಾರ ತೆರೆ ಬೀಳಲಿದೆ. ಅಭ್ಯರ್ಥಿಗಳಲ್ಲಿ ಢವಢವ ಶುರುವಾಗಿದೆ. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಕೊಪ್ಪಳ ತಾಲೂಕಿನ 38 ಗ್ರಾಪಂ, ಯಲಬುರ್ಗಾದ 20, ಕುಕನೂರಿನ 15, ಗಂಗಾವತಿ 18, ಕಾರಟಗಿ 11, ಕನಕಗಿರಿ 11 ಮತ್ತು ಕುಷ್ಟಗಿ ತಾಲೂಕಿನ 36 ಗ್ರಾಪಂಗಳಿಗೆ ಚುನಾವಣೆ ನಡೆದಿದೆ. ಗ್ರಾಪಂಗಳ ಮತ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರಗಳಲ್ಲೆ ನಡೆಯಲಿದ್ದು, ಕೊಪ್ಪಳದ ಗವಿಸಿದ್ಧೇಶ್ವರ ಪ್ರೌಢ ಶಾಲೆ, ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಕನೂರಿನ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆ, ಗಂಗಾವತಿಯ ಲಯನ್ಸ್ ಪ್ರೌಢ ಶಾಲೆ ಮತ್ತು ಕಾಲೇಜು ವಿಭಾಗ, ಕಾರಟಗಿಯ ಸಿ.ಮಲ್ಲಿಕಾರ್ಜುನ ನಾಗಪ್ಪ ಪಿಯು ಕಾಲೇಜು, ಕನಕಗಿರಿ ಸರ್ಕಾರಿ ಪ್ರೌಢಶಾಲೆ ಮತ್ತು ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಏಳು ತಾಲೂಕುಗಳ 149 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಒಟ್ಟು 1004 ಮತ ಕ್ಷೇತ್ರಗಳಿದ್ದು, 478 ಮತ ಎಣಿಕೆ ಮೇಜು ಒದಗಿಸಲಾಗಿದೆ. 82 ಕೊಠಡಿಗಳಲ್ಲಿ ಎಣಿಕೆ ನಡೆಯಲಿದ್ದು, 478 ಮೇಲ್ವಿಚಾರಕರು, 954 ಸಹಾಯಕ ಸಿಬ್ಬಂದಿ ನೇಮಿಸಲಾಗಿದೆ. ಹೆಚ್ಚುವರಿಯಾಗಿ 27 ಸಿಬ್ಬಂದಿಯನ್ನು ಕಾಯ್ದಿರಿಸಿದ್ದು, ಒಟ್ಟು 1458 ಸಿಬ್ಬಂದಿ ಮತ ಎಣಿಕೆ ಕಾರ್ಯ ನಿರ್ವಹಿಸಲಿದ್ದಾರೆ.
ಲೆಕ್ಕಾಚಾರ ಆರಂಭ: ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಲೇ ಅಭ್ಯರ್ಥಿಗಳಲ್ಲಿ ಸೋಲು-ಗೆಲವಿನ ಆತಂಕ, ಸಂತೋಷ ಎರಡೂ ಶುರುವಾಗಿದೆ. ಮತದಾನ ಪ್ರಕ್ರಿಯೆ ಬಳಿಕ ಸೋಲು ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆದಿದ್ದು, ನಿಖರ ಫಲಿತಾಂಶ ಡಿ.30ರ ಬುಧವಾರ ದೊರೆಯಲಿದೆ. ಮತ ಎಣಿಕೆಗೆ ತೆರಳಲು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದು, ಗೆದ್ದರೆ ಸಂಭ್ರಮಾಚರಣೆ ಮಾಡಲು ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಗ್ರಾಪಂ ಚುನಾವಣೆಯ ಮತ ಎಣಿಕೆ ಕೊಪ್ಪಳ ಜಿಲ್ಲೆಯ ಏಳು ಕೇಂದ್ರಗಳಲ್ಲಿ ನಡೆಯಲಿದೆ. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. | ಎಸ್.ವಿಕಾಸ್ ಕಿಶೋರ್. ಜಿಲ್ಲಾಧಿಕಾರಿ ಕೊಪ್ಪಳ.