

ಚಳಿ ಹಿನ್ನೆಲೆಯಲ್ಲಿ ಮತಗಟ್ಟೆಗೆ ತಡವಾಗಿ ಬಂದ ಮತದಾರರು
ಕೊಪ್ಪಳ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಗ್ರಾಪಂ ಚುನಾವಣೆಗೆ ಮಂಗಳವಾರ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
ಕೊಪ್ಪಳ ತಾಲೂಕಿನ 38, ಯಲಬುರ್ಗಾ 20 ಮತ್ತು ಕುಕನೂರು ತಾಲೂಕಿನ 15 ಸೇರಿ 73 ಗ್ರಾಪಂಗಳ 1,212 ಸದಸ್ಯರಿಗೆ ಮತದಾರರು ಮತ ಚಲಾಯಿಸುವ ಮೂಲಕ ಭವಿಷ್ಯ ಬರೆದರು. ಬೆಳಗ್ಗೆ ಚಳಿ ಹೆಚ್ಚಿದ್ದ ಕಾರಣ ಮತದಾರರು ಮತಗಟ್ಟೆಯತ್ತ ತುಸು ತಡವಾಗಿ ಆಗಮಿಸಿದರು. ಬೆಳಗ್ಗೆ 8 ಗಂಟೆ ವೇಳೆಗೆ ಮತಗಟ್ಟೆಗಳು ಮತದಾರರಿಂದ ತುಂಬಿಕೊಂಡವು. ಮತಗಟ್ಟೆಗೆ ಆಗಮಿಸಿದವರಿಗೆ ಥರ್ಮಲ್ ಸ್ಕಾೃನಿಂಗ್ ಮಾಡಿ ಒಳ ಕಳಿಸಲಾಯಿತು. ಕೆಲವೆಡೆ ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿ ಒಳ ಕಳಿಸಲಾಯಿತು. ಮೊದ ಮೊದಲು ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್‌ನಲ್ಲಿನ ವೃದ್ಧರು, ಅನಾರೋಗ್ಯ ಪೀಡಿತರು, ಅಂಗವಿಕಲರನ್ನು ಕರೆತಂದು ಮತ ಹಾಕಿಸಿದರು. ಮಂಗಳಾಪುರದಲ್ಲಿ 96 ವರ್ಷದ ವೃದ್ಧೆ ಉತ್ಸಾಹದಿಂದ ಮತದಾನ ಮಾಡಿದರು. ಇಲ್ಲಿ ಗಾಲಿಕುರ್ಚಿ ಇಲ್ಲದ ಕಾರಣ ವೃದ್ಧರು, ಅಂಗವಿಕಲರಿಗೆ ಕೊಂಚ ತೊಂದರೆಯಾಯಿತು. ಹಲಗೇರಿ ಗ್ರಾಮದಲ್ಲಿ ಜಿಲ್ಲಾ ಚುನಾವಣಾ ವೀಕ್ಷಕ ಡಾ.ಬಿ.ಷಣ್ಮುಖ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.
ಮತಕೇಂದ್ರದ 100 ಮೀ. ಅಂತರದಲ್ಲಿ ಯಾವುದೇ ಪ್ರಚಾರ, ಮಾದರಿ ಮತಪತ್ರಗಳು, ಅಭ್ಯರ್ಥಿಗಳು ಪ್ರಭಾವ ಬೀರದಂತೆ ನಿಯಮವಿದೆ. ಆದರೆ, ಬಹುತೇಕ ಮತಗಟ್ಟೆಗಳ ಮುಂಭಾಗದಲ್ಲೇ ಅಭ್ಯರ್ಥಿಗಳು ನಿಂತು ಪ್ರಭಾವ ಬೀರುತ್ತಿದ್ದರು. ಅಲ್ಲದೇ ಅವರವ ಚಿಹ್ನೆಗಳಿರುವ ಚಿಕ್ಕ ಚಿಕ್ಕ ಹಾಳೆಗಳು ಮತದಾರ ಕೈಯಲ್ಲಿ ಹಾಗೂ ಮತ ಕೇಂದ್ರದ ಮುಂದೆಯೇ ಬಿದ್ದಿರುವುದು ಕಂಡುಬಂತು. ಅಲ್ಲಲ್ಲಿ ಪರಸ್ಪರ ಅಭ್ಯರ್ಥಿಗಳ ನಡುವೆ ಸಣ್ಣಪುಟ್ಟ ವಾಗ್ವಾದಗಳು ನಡೆದವು. ಹಿರೇ ಸಿಂದೋಗಿ ಗ್ರಾಮದಲ್ಲಿ ಗಲಾಟೆ ನಡೆದ ತಕ್ಷಣ ಎಸ್ಪಿ ಟಿ.ಶ್ರೀಧರ್ ಸ್ಥಳಕ್ಕೆ ಧಾವಿಸಿದರು. ಯಾವುದೇ ಗಲಾಟೆ, ಅನಗತ್ಯ ಗುಂಪುಗಾರಿಕೆಗೆ ಅವಕಾಶ ನೀಡದಂತೆ ಸಿಬ್ಬಂದಿಗೆ ಸೂಚಿಸಿದರು. ಮತ್ತೊಂದೆಡೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿರುವ ಗ್ರಾಮಗಳಿಗೆ ಭೇಟಿ ನೀಡಿ ಅಭ್ಯರ್ಥಿಗಳಿಗೆ ನೈತಿಕ ಬೆಂಬಲ ಸೂಚಿಸಿದರು.