

ಕೊಪ್ಪಳ: ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸಮ ಪ್ರಮಾಣದಲ್ಲಿರಬೇಕು. ಇಲ್ಲದಿದ್ದರೆ ಅನಾರೋಗ್ಯ ಕಾಡುತ್ತದೆ ಎಂದು ನಗರ ಕೇಂದ್ರ ವೈದ್ಯಾಧಿಕಾರಿ ಡಾ.ಮಹೇಶ ಉಮಚಗಿ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಇದ್ದರೆ ಮಾತ್ರ ನಮ್ಮ ದೇಹದ ಭಾಗಗಳಿಗೆ ಆಮ್ಲಜನರ ಪರಿಚಲನೆ ಆಗುತ್ತದೆ. ಕಡಿಮೆ ಇದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ. ಉತ್ತಮ, ಶುಚಿ ಮತ್ತು ಪೌಷ್ಠಿಕ ಆಹಾರ ಸೇವಿಸಿ. ದುಶ್ವಟಗಳಿಗೆ ಬಲಿಯಾಗಬೇಡಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿ, ಸರಿಯಾಗಿ ಆಹಾರ ಸೇವಿಸದಿದ್ದಲ್ಲಿ ರಕ್ತ ಹೀನತೆ ಕಾಡುತ್ತದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ. ದೇಹಕ್ಕೆ ಅಗತ್ಯ ಇರುವ ಪ್ರೋಟಿನ್ ಹಾಗೂ ಇತರ ಪೋಷಕಾಂಶ ದೊರೆಯುವಂತೆ ನೋಡಿಕೊಳ್ಳಿ. ಜಂಕ್ ುಡ್ ಬದಲು ಪೌಷ್ಠಿಕ ಆಹಾರ ಸೇವಿಸುವಂತೆ ಸಲಹೆ ನೀಡಿದರು.
ಯುವರೆಡ್ ಕ್ರಾಸ್ ಘಟಕ ಸಂಚಾಲಕ ಡಾ.ಪ್ರದಿಪ್ ಕುಮಾರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿನಿಯರಿಗೆ ಹಿಮೋಗ್ಲೋಬಿನ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕಡಿಮೆ ಇರುವವರಿಗೆ ಮೂರು ತಿಂಗಳು ಮಾತ್ರ ನೀಡಲಾಗುತ್ತದೆ. ಬಳಿಕ ಮತ್ತೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ತಂತ್ರಜ್ಞ ಸಂತೋಷ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಉದಯ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಚೌಡಮ್ಮ, ಸಹ ಪ್ರಾಧ್ಯಾಪಕರಾದ ಡಾ.ಹುಲಿಗೆಮ್ಮ ಬಿ, ಡಾ.ನರಸಿಂಹ ಇತರರಿದ್ದರು.