ಸರ್ಕಾರಕ್ಕೆ ರೈತರ ಹಿತ ಮುಖ್ಯವಲ್ಲ- ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪ

231120 DK Shivakumar Hitnal Visit
ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಹೂವಿನ ಹಾರ ಹಾಕಿ ಸ್ವಾಗತಿಸಿಕೊಂಡರು.
Published on

ಕೊಪ್ಪಳ: ರಾಜ್ಯದಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದರೆ, ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸರ್ಕಾರ ಹಾಗೂ ಅಧಿಕಾರ ಉಳಿಸಿಕೊಳ್ಳುವು ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ತಾಲೂಕಿನ ಹಿಟ್ನಾಳ್ ಗ್ರಾಮದ ಶಾಸಕ ರಾಘವೇಂದ್ರ ಹಿಟ್ನಾಳ್ ಮನೆಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭತ್ತದ ಬೆಲೆ ಕುಸಿದಿದ್ದು, ಕ್ವಿಂಟಾಲ್‌ಗೆ 900 ರೂ. ದರವಿದೆ. ರೈತರೆಲ್ಲ ಕಂಗಾಲಾಗಿದ್ದಾರೆ. ಮೆಕ್ಕೆಜೋಳಕ್ಕೂ ಸೂಕ್ತ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಕ್ವಿಂಟಾಲ್ ಭತ್ತಕ್ಕೆ ಹೆಚ್ಚುವರಿಯಾಗಿ 500 ರೂ. ಪ್ರೋತ್ಸಾಹಧನ ವಿತರಿಸಬೇಕು. ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲದಿದ್ದರೂ ಬೆಲೆ ಹೆಚ್ಚಳ ಮಾಡಲಾಗಿದೆ. ಕೂಡಲೇ ದರ ಇಳಿಕೆ ಮಾಡಬೇಕು. ರಾಜ್ಯ ಸರ್ಕಾರದ ಎಲ್ಲ ವೈಫಲ್ಯಗಳ ಕುರಿತು ಚರ್ಚಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಇದೇ ತಿಂಗಳು 30ರಂದು ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಶಾಸಕರಾದ ಅಮರೆಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಇತರರಿದ್ದರು.

ಅದ್ದೂರಿ ಸ್ವಾಗತ: ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ರನ್ನು ರಸ್ತೆಯಿಂದ ಮನೆವರೆಗೆ ರೆಡ್ ಕಾರ್ಪೆಟ್ ಹಾಸಿ ಹಿಟ್ನಾಳ್ ಸಹೋದರರು ಸ್ವಾಗತಿಸಿದರು. ಗ್ರಾಮವೆಲ್ಲ ಫ್ಲೆಕ್ಸ್‌ಮಯವಾಗಿತ್ತು. ಪಟಾಕಿ ಸುಟ್ಟು, ಡ್ರಮ್ಸ್ ಬಾರಿಸುವ ಮೂಲಕ ಬರಮಾಡಿಕೊಂಡರು. ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದು ಕಂಡುಬಂತು.

ಪೇರಲ ಹಣ್ಣು ಖರೀದಿ: ಹಿಟ್ನಾಳ್‌ದಿಂದ ಗಂಗಾವತಿಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಪೇರಲ ಹಣ್ಣನ್ನು ಡಿ.ಕೆ.ಶಿವಕುಮಾರ್ ಖರೀದಿಸಿ ಸವಿದರು. ಸ್ವತಃ ತಾವೇ ಕಾರ್‌ನಿಂದ ಇಳಿದು ಹಣ್ಣಿನ ವ್ಯಾಪಾರಿ ಜತೆ ವ್ಯಾಪಾರ ಹಾಗೂ ಹಣ್ಣಿನ ಬಗ್ಗೆ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net