

ಕೊಪ್ಪಳ: ಗ್ರಾಮೀಣ ವೃತ್ತ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ನಾಲ್ಕು ಕಳ್ಳತನ ಪ್ರಕಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 14.50 ಲಕ್ಷ ರೂ. ಮೌಲ್ಯದ 290 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.
ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿದ್ದು, 15 ದಿನದಲ್ಲಿ 8 ಪ್ರಕರಣಗಳನ್ನು ಭೇದಿಸಲಾಗಿದೆ. ಮೊದಲ ನಾಲ್ಕು ಪ್ರಕರಣಗಳಲ್ಲಿ 170 ಗ್ರಾಂ ಬಂಗಾರ ಸಿಕ್ಕಿದ್ದು, ಈ ಬಾರಿ 290 ಗ್ರಾಂ ಬಂಗಾರ ವಶಕ್ಕೆ ಪಡೆದಿದ್ದೇವೆ.
ಕನಕಗಿರಿ ತಾಲೂಕಿನ ಹುಲಸನಟ್ಟ ಗ್ರಾಮದ ಹನುಮೇಶ ಭಜಂತ್ರಿ, ಗಂಗಾವತಿ ತಾಲೂಕಿನ ಬಸಾಪಟ್ಟಣದ ರಾಘವೇಂದ್ರ ಭಜಂತ್ರಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಳವಂಡಿ, ಕಾತರಕಿ ಗುಡ್ಲಾನೂರು, ಹುಲಿಗಿ ಹಳೇ ನಿಂಗಾಪುರ ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದ 290 ಗ್ರಾಂ ಬಂಗಾರದ ಆಭರಣಗಳನ್ನು ಖಾಸಗಿ ಬ್ಯಾಂಕ್‌ನಲ್ಲಿ ಅಡ ಇಟ್ಟಿದ್ದರು. ನಮ್ಮ ತಾಂತ್ರಿಕ ತಂಡ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಬಂಗಾರದೊಂದಿಗೆ 50 ಸಾವಿರ ರೂ. ಮೌಲ್ಯದ ಒಂದು ಬೈಕ್, ಮೊಬೈಲ್ ಸಹ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಶರಣಪ್ಪ ಸುಬೇದಾರ, ಸಿಪಿಐ ಮಹಾಂತೇಶ ಸಜ್ಜನ, ನಗರಠಾಣೆ ಪಿಐ ಸಂತೋಷ ಹಳ್ಳೂರು ಹಾಗೂ ಪಿಎಸ್‌ಐಗಳು, ಪಿಸಿಗಳು ಶ್ರಮವಹಿಸಿದ್ದು, ಅವರಿಗೆ ವೈಯಕ್ತಕವಾಗಿ 20 ಸಾವಿರ ರೂ. ಬಹುಮಾನ ಘೋಷಿಸಿರುವೆ ಎಂದರು.
ಪಿಎಸ್‌ಐಗಳಾದ ನಾಗಪ್ಪ, ಅಶೋಕ ಬೇವೂರು, ಸುನಿಲ್ ಎಚ್., ಮೀನಾಕ್ಷಿ, ಎಎಸ್‌ಐಗಳಾದ ಶಶಿಕಾಂತ, ಕೃಷ್ಣ ಇತರ ಸಿಬ್ಬಂದಿ ಇದ್ದರು.
ಬ್ಯಾಂಕ್‌ಗಳಗೆ ಪತ್ರ: ಈ ಮೊದಲು ಕದ್ದ ಬಂಗಾರವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ಗಳಲ್ಲಿ ಇನ್ನೊಬ್ಬರ ಹೆಸರಿನಲ್ಲಿ ಗಿರವಿ ಇಟ್ಟು ಸಾಲ ಪಡೆಯುತ್ತಿದ್ದಾರೆ.
ಇಂಥ ಪ್ರಕರಣ ಭೇದಿಸುವುದು ಕಷ್ಟದ ಕೆಲಸ. ಸೂಕ್ತ ದಾಖಲೆ ಇಟ್ಟುಕೊಂಡೇ ಲೋನ್ ನೀಡಿರುತ್ತಾರೆ. ಆದರೂ, ಅನುಮಾನಾಸ್ಪದ, ಸೂಕ್ತ ದಾಖಲೆ ನೀಡದವರು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗುವುದೆಂದು ಎಸ್ಪಿ ಮಾಹಿತಿ ನೀಡಿದರು.