

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಮಾಟಲದಿನ್ನಿಯ ಶಫಿಕ್ ಬೀರಸಾಬ ಮೇಲ್ಗಡೆ ಎಂಬಾತನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ನಗರದ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶಿಸಿದೆ.
ಕುಕನೂರು ತಾಲೂಕಿನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕುಟುಂಬದೊಂದಿಗೆ ಕೂಲಿ ಕೆಲಸಕ್ಕೆ ಬಾಲಕಿ ಬಂದಿದ್ದಳು. ಈಕೆಯನ್ನು ಶಫಿಕ್ ಪ್ರೀತಿಸುವುದಾಗಿ ಪುಸಲಾಯಿಸಿ, ವಾಸಕ್ಕೆಂದು ನೀಡಿದ್ದ ಶೆಡ್‌ಗೆ ಕರೆದೊಯ್ದು ಹಲವು ಬಾರಿ ಅತ್ಯಾಚಾರ ಎಸಗಿದ್ದ.
ನಿರ್ಮಾಣ ಕೆಲಸ ಮುಗಿದ ನಂತರ ಬಾಧಿತಳು ತಮ್ಮ ಗ್ರಾಮಕ್ಕೆ ಹೋಗುವ ವಿಷಯ ತಿಳಿದು 2019 ಜೂ.2ರಂದು ಕುಕನೂರು ಬಸ್ ನಿಲ್ದಾಣದಿಂದ ಆಕೆಯನ್ನು ಅಪಹರಿಸಿದ್ದ. ಮಹಾರಾಷ್ಟ್ರದ ಸತಾರ ನಗರಕ್ಕೆ ಕರೆದೊಯ್ದು 20 ದಿನಗಳವರೆಗೆ ಅಲ್ಲೇ ತಂಗಿದ್ದ. ಅಲ್ಲೂ ಬಾಲಕಿ ಮೇಲೆ ಆಗಾಗ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಲಬುರ್ಗಾ ಗ್ರಾಮೀಣ ವೃತ್ತ ಸಿಪಿಐ ರಮೇಶ ರೊಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಶಫಿಕ್ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ಭರಿಸಲು ಸೂಚಿಸಿದೆ.
ದಂಡದ ಮೊತ್ತದಲ್ಲಿ 10 ಸಾವಿರ ರೂ.ಗಳನ್ನು ಬಾಧಿತಳಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಜೂ.24ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.