

ಕೊಪ್ಪಳ: ಗಿಣಿಗೇರಾ&ಗಬ್ಬೂರು&ಕೂಕನಪಳ್ಳಿ ರಸ್ತೆ ಅಭಿವೃದ್ಧಿ, ಆಸ್ಪತ್ರೆ ಉನ್ನತಿಕರಣ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಿಣಿಗೇರಾ ನಾಗರಿಕ ಹೋರಾಟ ಸಮಿತಿ, ಎಸ್ಯುಸಿಐಸಿ ನೇತೃತ್ವದಲ್ಲಿ ಸಾರ್ವಜನಿಕರು ಗಿಣಿಗೇರಾ ಗ್ರಾಮದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಎಸ್ಯುಸಿಐಸಿ ಮುಖಂಡ ಶರಣು ಗಡ್ಡಿ ಮಾತನಾಡಿ, ಗ್ರಾಮದಲ್ಲಿ ಜನವಸತಿ ದಿನ ಕಳೆದಂತೆ ಹೆಚ್ಚುತ್ತಿದೆ. ವಲಸೆ ಕಾರ್ಮಿಕರ ಬೀಡಾಗುತ್ತಿದೆ. ಕಾರ್ಖಾನೆಗಳು ಹೆಚ್ಚಾಗಿದ್ದು ಧೂಳು ಗ್ರಾಮದಲ್ಲಿ ಆವರಿಸುತ್ತಿದೆ. ಜನರ ಆರೋಗ್ಯ ಹಾಳಾಗುತ್ತಿದೆ. ಗಿಣಿಗೇರಾ&ಗಬ್ಬೂರು&ಕೂಕನಪಳ್ಳಿ ರಸ್ತೆ ಸಂಪೂರ್ಣ ಹಾಳಾಗಿದೆ. ಇತರ ರಸ್ತೆಗಳು ಅಷ್ಟಕ್ಕಷ್ಟೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಮಂಗಳೇಶ ರಾಠೋಡ ಮಾತನಾಡಿ, ರಸ್ತೆಗಳ ಬದಿ ಗಿಡ ನೆಟ್ಟಿಲ್ಲ. ಬೀದಿ ದೀಪಗಳಿಲ್ಲ. ಆಸ್ಪತ್ರೆ ಸೇರಿ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ಗಂಗಾವತಿಯಿಂದ ಬರುವ ಬಸ್ಗಳು ಬೈಪಾಸ್ಗೆ ಹೋಗದೇ, ಗ್ರಾಮದಲ್ಲಿ ಹಾದು ಹೋಗುವಂತೆ ಕ್ರಮವಹಿಸಿ. ಕಾರ್ಖಾನೆಗಳಿದ್ದು, ಸಿಎಸ್ಆರ್ ನಿಧಿಯಗಡಿ ಗ್ರಾಮ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಮೌನೇಶ್, ಸುರೇಶ ಕಲಾಲ್, ದ್ಯಾಮಣ್ಣ ಡೊಳ್ಳಿನ, ಹನುಮಂತ ಕಟಿಗಿ, ರಾಘವೇಂದ್ರ, ಮಲ್ಲಿಕಾರ್ಜುನ ಗೋಡೆಕಾರ್, ವಿಷ್ಣು, ರವಿ, ಅನುರಾಧ, ಚಿಕ್ಕಪ್ಪ ಉಪ್ಪಾರ, ನರಸಪ್ಪ ಗುಳದಲ್ಲಿ, ಜಂಬಣ್ಣ ಉಪ್ಪಾರ ಇತರರಿದ್ದರು.