ಕೊಪ್ಪಳ ಗವಿಮಠದ ಶಿವಶಾಂತವೀರರ 19ನೇ ಪುಣ್ಯಸ್ಮರಣೆ: ಗವಿಶ್ರೀಗಳ ನೇತೃತ್ವದಲ್ಲಿ ಭಕ್ತರ ಪಾದಯಾತ್ರೆ

260322 19th Commemoration of Koppal Shivashanthaweera Hike
ಕೊಪ್ಪಳದಲ್ಲಿ ಶಿವಶಾಂತವೀರ ಶ್ರೀಗಳ 19ನೇ ಪುಣ್ಯಸ್ಮರಣೆ ಅಂಗವಾಗಿ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಪಾಲ್ಗೊಂಡಿದ್ದ ಭಕ್ತಗಣ.
Published on

ಕೊಪ್ಪಳ: ಗವಿಮಠದ ಲಿಂ.ಶಿವಶಾಂತವೀರ ಶ್ರೀಗಳ 19ನೇ ಪುಣ್ಯಸ್ಮರಣೆ ಅಂಗವಾಗಿ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಶನಿವಾರ ನಗರದ ಮಳೆ ಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಸಾವಿರಾರು ಭಕ್ತರು ಪಾದಯಾತ್ರೆ ನಡೆಸಿದರು.

ಪ್ರತಿ ವರ್ಷ ಪಾದಯಾತ್ರೆ ಹಮ್ಮಿಕೊಳ್ಳುವುದು ಸಂಪ್ರದಾಯ. ಕರೊನಾ ಕಾರಣ ಕಳೆದೆರಡು ವರ್ಷದಿಂದ ಸಾಂಕೇತಿಕವಾಗಿ ಪಾದಯಾತ್ರೆ ನಡೆಸಲಾಗಿತ್ತು. ಈ ಬಾರಿ ಕೋವಿಡ್ ಪ್ರಭಾವ ತಗ್ಗಿದ್ದು, ಸಂಪ್ರದಾಯದಂತೆ ಸಾವಿರಾರು ಭಕ್ತರೊಂದಿಗೆ ಪಾದಯಾತ್ರೆ ನಡೆಸಲಾಯಿತು. ಮಳೆ ಮಲ್ಲೇಶ್ವರ ಬೆಟ್ಟಕ್ಕೆ ತೆರಳಲು ಭಕ್ತರಿಗಾಗಿ ಉಚಿತ ಬಸ್ ಸೇವೆ ಒದಗಿಸಲಾಗಿತ್ತು. ಬೆಳಗ್ಗೆ 6 ಗಂಟೆಗೆ ಆರಂಭವಾದ ಯಾತ್ರೆ ನಗರದ ಮುಖ್ಯರಸ್ತೆ, ಬನ್ನಿಕಟ್ಟಿ, ಲಾಲ್‌ಬಹದ್ದೂರ್ ಶಾಸ್ತ್ರಿ ವೃತ್ತ, ಅಶೋಕ ವೃತ್ತ, ಗಡಿಯಾರ ಕಂಬ ವೃತ್ತ ಮಾರ್ಗವಾಗಿ ಗವಿಮಠದವರೆಗೆ ಸಾಗಿತು. ಗವಿಮಠದ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು, ಮಕ್ಕಳಾದಿಯಾಗಿ ನಗರ, ಗ್ರಾಮೀಣ ಭಾಗದ ಜನರು ಭಾಗಿಯಾಗಿದ್ದರು. ಯಾತ್ರಿಗಳಿಗಾಗಿ ರಸ್ತೆ ಮಧ್ಯೆ ಅಲ್ಲಲ್ಲಿ ಪಾನಕ, ಮಜ್ಜಿಗೆ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಳಗಾನೂರಿನ ಶಿವಶಾಂತವೀರ ಶರಣರು, ಹಡಗಲಿ ಡಾ.ಹಿರಿಶಾಂತವೀರ ಮಹಾಸ್ವಾಮೀಜಿ, ಮೈನಳ್ಳಿ ಶಿವಸಿದ್ದೇಶ್ವರ ಶಿವಾಚಾರ್ಯರು, ಬಿಜಕಲ್‌ನ ಶಿವಲಿಂಗ ಸ್ವಾಮೀಜಿ ಗವಿಶ್ರೀಗಳೊಂದಿಗೆ ಹೆಜ್ಜೆ ಹಾಕಿದರು. ಸಾವಿರಾರು ಭಕ್ತರ ಆಗಮನ ಹಿನ್ನೆಲೆಯಲ್ಲಿ ಗವಿಮಠದ ಮಹಾದಾಸೋಹ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಿನವಿಡೀ ಕಾರ್ಯಕ್ರಮಗಳಿದ್ದ ಕಾರಣ ಬೆಳಗ್ಗೆಯಿಂದ ತಡರಾತ್ರಿವರೆಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿರಾ, ರೊಟ್ಟಿ, ಹೆಸರುಕಾಳು ಪಲ್ಯ, ಬದನೆಕಾಯಿ ಪಲ್ಯ, ಅನ್ನ, ಸಾಂಬಾರ್, ಕಡಲೆ ಪುಡಿ, ಮಜ್ಜಿಗೆ ಸವಿದರು. ಸಾವಿರಾರು ಜನರು ಭಾಗಿಯಾದ ಹಿನ್ನೆಲೆಯಲ್ಲಿ ಗವಿಮಠ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net