ಕೂಡಿ ಬಾಳಲು ಗವಿಶ್ರಿ ಸಲಹೆ

IMG-20240922-WA0048
Published on
  • ದಂಪತಿ ವಿಚ್ಛೇದನ ಪ್ರಕರಣ
  • ಮಠಕ್ಕೆ ಭೇಟಿ ನೀಡಿದ ಸಂಬಂಧಿಗಳು

ಕೊಪ್ಪಳ: ವಿಚ್ಛೇದನ ಕೋರಿ ಧಾರವಾಡ ಹೈಕೋರ್ಟ್​ ಮೊರೆ ಹೋಗಿದ್ದ ದಂಪತಿ ಹಾಗೂ ಅವರ ಕುಟುಂಬದವರು ನ್ಯಾಯಾಧೀಶರ ಸೂಚನೆಯಂತೆ ಶನಿವಾರ ಮತ್ತು ಭಾನುವಾರ ಪ್ರತ್ಯೇಕವಾಗಿ ನಗರದ ಗವಿಮಠಕ್ಕೆ ಭೇಟಿ ನೀಡಿ ಗವಶ್ರೀಗಳನ್ನು ಭೇಟಿ ಮಾಡಿದರು. ಈ ವೇಳೆ ಶ್ರೀಗಳು ಹೊಂದಾಣಿಕೆಯಿಂದ ಕೂಡಿ ಬಾಳುವಂತೆ ಸಲಹೆ ನೀಡಿ ಕಳಿಸಿದರು.

ಗದಗ ಮೂಲದ ದಂಪತಿ ವಿವಾಹ ವಿಚ್ಛೇದನ ಕೋರಿ ಧಾರವಾಡ ಹೈ ಕೋರ್ಟ್​ ಮೊರೆ ಹೋಗಿದ್ದಾರೆ. ಸಣ್ಣ ಪುಟ್ಟ ಕಾರಣಗಳನ್ನು ಇಟ್ಟುಕೊಂಡು ಬೇರಾಗುವುದು ಸರಿಯಲ್ಲ. ದಾಂಪತ್ಯದಲ್ಲಿ ಅನುಸರಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದ ನ್ಯಾಯಾಧೀಶರು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಿಕೊಳ್ಳುವಂತೆ ತಿಳಿಸಿದ್ದರು. ಸತಿ&ಪತಿ ಒಪ್ಪಿಗೆಯಂತೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಇಬ್ಬರೂ ಒಟ್ಟಿಗೆ ತೆರಳಿ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಶ್ರೀಗಳಿಗೂ ಪತ್ರ ಬರೆದು ಆಪ್ತ ಸಮಾಲೋಚನೆ ನಡೆಸಲು ವಿನಂತಿಸಿದ್ದರು.

ಗವಿಶ್ರೀಗಳು ವಾರದ ಹಿಂದೆ ಮೌನ ಅನುಷ್ಠಾನದಲ್ಲಿದ್ದರು. ಶನಿವಾರ ಅನುಷ್ಠಾನ ಅಂತ್ಯಗೊಂಡಿದೆ. ದಂಪತಿ ಒಟ್ಟಿಗೆ ಶ್ರೀಗಳನ್ನು ಭೇಟಿ ಮಾಡಿಲ್ಲ. ಶನಿವಾರ ಮಹಿಳೆ ಹಾಗೂ ಅವರ ಕುಟುಂಬದವರು ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿದರು. ಸುಮಾರು ಹೊತ್ತು ಆಪ್ತ ಸಮಾಲೋಚನೆ ನಡೆಸಿದ ಶ್ರೀಗಳು ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಹೇಳಿದ್ದಾರೆ. ಭಾನುವಾರ ಪತಿ ಹಾಗೂ ಆತನ ಕಡೆಯವರು ಮಠಕ್ಕೆ ಆಗಮಿಸಿದರು.

ವಿಚ್ಛೇದನ ಬಯಸಿದ ವ್ಯಕ್ತಿ ಹಾಗೂ ಆತನ ಕುಟುಂಬದವರೊಂದೊಂದಿಗೆ ಶ್ರೀಗಳು ಮಾತುಕತೆ ನಡೆಸಿದರು. ಸಮಸ್ಯೆಗಳನ್ನು ಆಲಿಸಿ ಹೊಂದಾಣಿಕೆಯಿಂದ ಬಾಳವಂತೆ ತಿಳಿ ಹೇಳಿದ್ದಾರೆ. ಒಂದೇ ದಿನದಲ್ಲಿ ಸಮಸ್ಯೆ ಪರಿಹಾರವಾಗುವುದಿಲ್ಲ. ಸಕಾರಾತ್ಮಕತೆಯಿಂದ ಹೊಂದಾಣಿಕೆ ಮಾಡಿಕೊಳ್ಳಿ. ಅವರಿವರ ಮಾತಿಗೆ ಆದ್ಯತೆ ನೀಡದೇ ನಿಮ್ಮ ಜೀವನ ನೀವೇ ಸುಂದರವಾಗಿಸಿಕೊಳ್ಳಿ ಎಂದು ಅರಿವು ಮೂಡಿಸಿದ್ದಾರೆ.

ಪ್ರಸಾದ ಸೇವಿಸಿ ತೆರಳಿದರು
ಶ್ರೀಗಳ ಭೇಟಿ ಬಳಿಕ ಪತಿ ಕುಟುಂಬದವರು ಶ್ರೀಮಠದ ಪ್ರಸಾದ ನಿಲಯಕ್ಕೆ ತೆರಳಿ ಪ್ರಸಾದ ಸೇವಿಸಿದರು. ನ್ಯಾಯಾಧೀಶ ಕೃಷ್ಣ ದೀತ್​ ಅವರ ಸೂಚನೆಯಂತೆ ಗವಿಶ್ರೀಗಳನ್ನು ಭೇಟಿ ಮಾಡಿದ್ದೇವೆ. ಶ್ರೀಗಳು ಹೊಂದಾಣಿಕೆಯಿಂದ ಬಾಳುವಂತೆ ಹೇಳಿದ್ದಾರೆ. ನಮ್ಮ ಹುಡುಗನೊಂದಿಗೆ ಮತ್ತೆ ಮಠಕ್ಕೆ ಬಂದು ಶ್ರೀಗಳನ್ನು ಕಾಣುತ್ತೇವೆ. ಅವರ ಅಪ್ಪಣೆ ಪಾಲಿಸುತ್ತೇವೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net