ಗಾಣಿಗ ಸಮುದಾಯದ ಕೊಡುಗೆ ಅಪಾರ- ಸಚಿವ ಹಾಲಪ್ಪ ಆಚಾರ್ ಬಣ್ಣನೆ

25122021 Halappa achar
Published on

ಕೊಪ್ಪಳ: ಗಾಣಿಗ ಸಮುದಾಯ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದರು. ನಗರದ ಗಾಣಿಗ ಸಮುದಾಯ ಭವನ ಉದ್ಘಾಟನೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಾಣಿಗ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಮೂಲಕ ಗ್ರಾಮೀಣ ಜನರನ್ನು ಮುಖ್ಯವಾಹಿನಿಗೆ ತರಬೇಕು. ಸಮಾಜದಲ್ಲಿ ಮುಂದೆ ಬಂದ ನೌಕರರ ವರ್ಗವು ಹಿಂದುಳಿದವರಿಗೆ ನೆರವಾಗಬೇಕು ಎಂದರು.

ಮಾಜಿ ಡಿಸಿಎಂ ಲಕ್ಷ್ಮ್ಮಣ ಸವದಿ ಮಾತನಾಡಿ, ಗಾಣಿಗ ಸಮುದಾಯ ಬೆಳೆಸುವ ಜವಾಬ್ದಾರಿ ಸ್ವಾಮೀಜಿಗಳದ್ದು. ಗಾಣಿಗರು ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗಧಾರಣೆ ಮಾಡಿದವರು. ಎಲ್ಲರೂ ಒಗ್ಗೂಡಿಕೊಂಡು ಹೋಗೋಣ. ನಮ್ಮ ಸಂಘಟನೆಯಿಂದ ಇನ್ನೊಂದು ಸಮಾಜಕ್ಕೆ ನೋವಾಗಬಾರದು. ಗಾಣಿಗ ನಿಗಮ ಸ್ಥಾಪನೆಯಾಗಬೇಕಿದೆ. ಹಿರಿಯರು ಈ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕು ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಗಾಣಿಗರಲ್ಲಿ ಶೈವ, ವೈಷ್ಣವ ಸಂಸ್ಕೃತಿ ಇದೆ. ಕರ್ನಾಟಕದಲ್ಲಿ ಶೈವ ಗಾಣಿಗರು ಲಿಂಗ ಧಾರಣೆ ಮಾಡಿದರು. ಗಾಣ, ಕೃಷಿ ನಂಬಿಕೊಂಡಿದ್ದವರು. ಗಾಣ ಬಂದ್ ಆದ ಕಾರಣ ಸಮುದಾಯ ಹಿಂದುಳಿಯಬೇಕಾಯಿತು ಎಂದರು. ಶಾಸಕರಾದ ಅಮರೇಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ ಮಾತನಾಡಿದರು. ಶ್ರೀ ಕೇಶವಾನಂದ ಸ್ವಾಮೀಜಿ, ಡಾ.ಜಯಬಸವ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಮುಖಂಡರಾದ ರುದ್ರಮುನಿ ಗಾಳಿ, ತೋಟಪ್ಪ ಕಾಮನೂರು ಇತರರಿದ್ದರು.

ಸಂಘಟನೆ, ಶಿಕ್ಷಣ ಹಾಗೂ ಹೋರಾಟದ ಮೂಲಕ ಸಮಾಜದ ಅಭಿವೃದ್ಧಿ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ. ಲಕ್ಷ್ಮಣ ಸವದಿ ನನ್ನ ಬಿಜೆಪಿಗೆ ಕರೆ ತಂದವರು. ನನ್ನ ಗೆಲುವಿಗೆ ಗಾಣಿಗ ಸಮಾಜ ಮೊದಲು ಬೆಂಬಲಿಸಿದೆ.| ಸಂಗಣ್ಣ ಕರಡಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net