

ಕೊಪ್ಪಳ : ಜಿಲ್ಲಾದ್ಯಂತ ಗಣೇಶ ಚತುರ್ಥಿ ಅಂಗವಾಗಿ ಸಾರ್ವಜನಿಕರು ಶನಿವಾರ ಗಜಾನನ್ನು ಸ್ವಾಗತಿಸಿದರು. ನಗರ ಸೇರಿ ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡಿವೆ.
ಯುಕವರು, ಮಕ್ಕಳು ಆಟೋ, ಟ್ರಾಕ್ಟರ್ಗಳಲ್ಲಿ ವಿನಾಯಕನನ್ನು ಕೂಡಿಸಿಕೊಂಡು ಮೆರವಣಿಗೆ ಮೂಲಕ ಕೊಂಡೊಯ್ದರು. ಕೊಪ್ಪಳದ ಈಶ್ವರ ಪಾರ್ಕ್, ಜೆಸ್ಕಾಂ, ಶಾರದಾ ಚಿತ್ರಮಂದಿರ ಹಿಂಭಾಗ, ಜವಾಹರ ರಸ್ತೆ ಸೇರಿ ಬಹುತೇಕ ರಸ್ತೆ, ಓಣಿಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾನೆಗೊಂಡಿವೆ. ಪ್ರಮುಖ ವೃತ್ತ, ಮರ, ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು, ರಾತ್ರಿ ವೇಳೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕ ಮೂರ್ತಿಗಳಿಂದ ಹಿಡಿದು ಹತ್ತಾರು ಅಡಿಯ ವಿಘ್ನೇಶ ಮೂರ್ತಿಗಳು ನೋಡುಗರ ಗಮನ ಸೆಳೆಯುತ್ತಿವೆ. ಗಣ್ಯರು, ಜನಪ್ರತಿನಿಧಿಗಳು ಪ್ರಮುಖ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶನ ದರ್ಶನ ಪಡೆದರು. ಭಾಗ್ಯನಗರ, ಕೊಪ್ಪಳ ಸೇರಿ ಇತರ ಗ್ರಾಮಗಳಲ್ಲಿ ಮೊದಲ ದಿನವೇ ಅನ್ನಸಂತರ್ಪಣೆ ಜರುಗಿತು.