ನಿಧಿ ಸಂಗ್ರಹ ಅಭಿಯಾನ ನಾಳೆಯಿಂದ; ವಿಎಚ್‌ಪಿ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ್ ಹೇಳಿಕೆ

RAM MANDIR PLAN
Published on

ಕೊಪ್ಪಳ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಕೊಪ್ಪಳ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜ.25ರ ಸೋಮವಾರದಿಂದ ವಿಶ್ವಹಿಂದು ಪರಿಷತ್‌ನಿಂದ ನಿಧಿ ಸಂಗ್ರಹ ಮಾಡಲಿದ್ದೇವೆ ಎಂದು ವಿಎಚ್‌ಪಿ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ್ ತಿಳಿಸಿದರು.

ರಾಜ್ಯದ 27,500 ಗ್ರಾಮ ಹಾಗೂ 90 ಲಕ್ಷ ಭಕ್ತರನ್ನು ತಲುಪಲು ಗುರಿ ಹಾಕಿಕೊಂಡಿದ್ದೇವೆ. ಕೂಪನ್ ಮತ್ತು ರಸೀದಿ ಮೂಲಕ ನಿಧಿ ಸಂಗ್ರಹಿಸಲಾಗುವುದು. 5 ಕಾರ್ಯಕರ್ತರ ತಂಡ ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗಿಯಾಗಲಿದೆ. ಮಂದಿರ ನಿರ್ಮಾಣಕ್ಕೆ ಎಲ್ ಆ್ಯಂಡ್ ಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿವಿಧ ಐಐಟಿಗಳು ಶ್ರಮಿಸುತ್ತಿವೆ. 2.7ಎಕರೆಯ 57 ಸಾವಿರ ಚದರ ಅಡಿ ಜಾಗದಲ್ಲಿ ಮಂದಿರ ನಿರ್ಮಾಣವಾಗಲಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ವಸ್ತು ಸಂಗ್ರಹಾಲಯ ಸೇರಿ ಹಲವು ಸೌಲಭ್ಯ ಇರಲಿವೆ ಎಂದು ಭಾನುವಾರ ಸುದ್ದಿಗೋಷ್ಠಿ ತಿಳಿಸಿದರು.

ರಾಮ ಮಂದಿರ ಮಾದರಿಯಲ್ಲಿ ರಾಮ ಬಂಟ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುತ್ತೇವೆ. ಸೋಮವಾರ ಬೆಳಗ್ಗೆ 10.30ಕ್ಕೆ ಕೊಪ್ಪಳದ ಪ್ರವಾಸಿ ಮಂದಿರದಿಂದ ಅಭಿಯಾನ ಆರಂಭವಾಗಲಿದೆ. ಮಾರುಕಟ್ಟೆ ಸೇರಿ ನಗರದ ಪ್ರಮುಖ ವೃತ್ತದಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ಜ.26ರಿಂದ ಗ್ರಾಮೀಣ ಭಾಗದಲ್ಲಿ ಸಂಗ್ರಹಿಸುತ್ತೇವೆ ಎಂದರು.

ಸಂಚಾಲಕರಾದ ಬಸವರಾಜ ಡಂಬಳ್, ಪ್ರಾಣೇಶ್ ಜೋಷಿ, ಬಳ್ಳಾರಿ ವಿಭಾಗದ ಸಹ ಸಂಯೋಜಕ ಅಯ್ಯನಗೌಡ ಹೇರೂರು, ವಿಎಚ್‌ಪಿ ಜಿಲ್ಲಾಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ, ಕಾರ್ಯದರ್ಶಿ ವೇಣುಗೋಪಾಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net