ಆ್ಯಪ್‌ನಿಂದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ: ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

anjaneya
Published on

ಕೊಪ್ಪಳ: ಡಿಜಿಟಲ್ ಆ್ಯಪ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಮಾರ್ಚ್ 31ವರೆಗೆ ನಡೆಯಲಿದೆ ಎಂದು ಮಾಜಿ ಸಚಿವ, ಸದಸ್ಯತ್ವ ಅಭಿಯಾನದ ಜಿಲ್ಲಾ ಉಸ್ತುವಾರಿ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಪ್ಪಳ ಜಿಲ್ಲೆಯ ನೋಂದಣಿ ಉಸ್ತುವಾರಿ ನನಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಿದ್ದು, ನಿರೀಕ್ಷೆ ಮೀರಿ ಸದಸ್ಯರ ನೋಂದಣಿಯಾಗಲಿದೆ. ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ 100 ಜನರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ನಮ್ಮ ನಾಯಕರು, ಮುಖಂಡರು, ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ಮಾಡಿಸಲಿದ್ದಾರೆ. ಸದಸ್ಯತ್ವಕ್ಕಾಗಿ ಪ್ರತಿಯೊಬ್ಬರೂ 5 ರೂ. ನೀಡಬೇಕು. ಬೂತ್‌ಗೆ ಒಬ್ಬ ಕಾಯಂ ಅಧ್ಯಕ್ಷ, ಕಾರ್ಯದರ್ಶಿ, ಏಜೆಂಟ್ ನೇಮಿಸಲಿದ್ದು, ನಿರಂತರವಾಗಿ ಸಂಘಟನೆ ಮಾಡಲಿದ್ದಾರೆ ಎಂದರು.

ಕರೊನಾದಿಂದ ದೇಶದಲ್ಲಿ ಜನರು ಪ್ರಾಣ ಬಿಡುತ್ತಿದ್ದು, ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಕರೊನಾ ಎಂಬುದು ಬಂಡವಾಳವಾಗಿದೆ. ಪ್ರತಿಭಟನೆ, ಹೋರಾಟಕ್ಕೆ ನಿಷೇಧ ಹೇರುವ ಮೂಲಕ ಸರ್ಕಾರದ ಅಕ್ರಮಗಳನ್ನು ಮುಚ್ಚಿಹಾಕುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಐಟಿ, ಸಿಬಿಐ ಹಾಗೂ ಇಡಿ ಸಂಸ್ಥೆಗಳನ್ನು ಬಳಸಿ ಕಟ್ಟಿಹಾಕಲಾಗುತ್ತಿದೆ. ರಾಜ್ಯದಲ್ಲಿ ಲಂಚಗುಳಿತನ ಹೆಚ್ಚಿದ್ದು, ಗುತ್ತಿಗೆದಾರರು ಬೇಸತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಹಿಂದೆ ಆಧಾರ ರಹಿತವಾಗಿ ಕಾಂಗ್ರೆಸ್‌ಗೆ 10 ಪರ್ಸೆಂಟ್ ಸರ್ಕಾರವೆಂದು ಗೂಬೆ ಕೂಡಿಸಿದ್ದರು. ಇಂದು ದಾಖಲೆ ಸಮೇತ ಗುತ್ತಿಗೆದಾರರು ದೂರು ನೀಡಿದರೂ ಮೌನವಾಗಿದ್ದಾರೆಂದು ವಾಗ್ದಾಳಿ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net