ವಿಷ ಜಂತುಗಳ ಬಗ್ಗೆ ಬೇಕು ಎಚ್ಚರ

koppal flood tungabhadra dam river dengue
ಕೊಪ್ಪಳ ನಗರದಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿರುವುದು.
Published on
  • ನದಿಪಾತ್ರದಲ್ಲಿ ಪ್ರವಾಹ ಭೀತಿ
  • ಕುಡಿವ ನೀರು ಶುದ್ಧೀಕರಣ ಅವಶ್ಯ

ವಿಜಯವಾಣಿ ವಿಶೇಷ ಕೊಪ್ಪಳ

ಮಲೆನಾಡಿನಲ್ಲಿ ವರುಣಾರ್ಭಟ ಹಿನ್ನೆಲೆಯಲ್ಲಿ ಮುನಿರಾಬಾದ್​ ತುಂಗಭದ್ರಾ ಜಲಾಶಯ ಮೈದುಂಬಿಕೊಂಡಿದೆ. ನದಿಗೆ ನೀರು ಬಿಟ್ಟಿದ್ದು, ಪ್ರವಾಹ ಭೀತಿ ಜತೆಗೆ ವಿಷ ಜಂತುಗಳ ಕಾಟವೂ ಹೆಚ್ಚಾಗುವ ಸಾಧ್ಯತೆಯಿದ್ದು ಜನರು ಎಚ್ಚರವಹಿಸಬೇಕಿದೆ.

ಜಲಾಶಯಕ್ಕೆ ಮಂಗಳವಾರ ಒಳಹರಿವು ಕೊಂಚ ತಗ್ಗಿರುವುದು ನೆಮ್ಮದಿ ತಂದಿದೆ. ನದಿಗೆ ಬಿಟ್ಟ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರವಾಹ ಭೀತಿಯಲ್ಲಿದ್ದ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಆದರೆ, ಒಳ ಹರಿವು ಯಾವಾಗದರೂ ಹೆಚ್ಚಾಗುವ ಸಾಧ್ಯತೆಯಿದ್ದು ಎಚ್ಚರದಿಂದ ಇರಬೇಕಿದೆ. ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳು ಹಿನ್ನೀರು ಪ್ರದೇಶಕ್ಕೆ ಒಳಪಡುತ್ತವೆ. ನಿಲೋಗಿಪುರ, ಹ್ಯಾಟಿ, ಕಾತರಕಿ, ಗೊಂಡಬಾಳ, ಕಾಸನಕಂಡಿ ಸೇರಿ ಇತರ ಗ್ರಾಮಗಳು ಹಿನ್ನೀರು ಭಾಗದಲ್ಲಿವೆ. ಇನ್ನು ಮುನಿರಾಬಾದ್​, ಶಿವಪುರ, ನಗರಗಡ್ಡಿ, ಗಂಗಾವತಿ, ಕಾರಟಗಿ ತಾಲೂಕಿನ ಗ್ರಾಮಗಳು ನದಿಪಾತ್ರದಲ್ಲಿವೆ.

ಜಲಾಶಯದಿಂದ ನಾಲ್ಕೆದು ದಿನಗಳಲ್ಲಿ ಅಧಿಕ ನೀರು ಹೊರ ಬಿಟ್ಟಿದ್ದರಿಂದ ನದಿ ಉಕ್ಕಿ ಹರಿದಿದೆ. ಸದ್ಯ ನೀರಿನ ಪ್ರಮಾಣ ತಗ್ಗಿದೆ. ಹೊಸದಾಗಿ ನೀರು ಬಂದ ಹಿನ್ನೆಲೆಯಲ್ಲಿ ಹಾವು ಸೇರಿ ಇತರ ಜನಚರಗಳ ಸಂಚಾರ ಅಧಿಕಗೊಂಡಿದೆ. ಆರಂಭದಲ್ಲಿ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿವೆ. ಮಳೆಗಾಲದಲ್ಲಿ ಬೆಚ್ಚನೆ ಸ್ಥಗಳಲ್ಲಿ ಹಾವುಗಳು ಬರಲಿದ್ದು ಎಚ್ಚರದಿಂದ ಇರಬೇಕಿದೆ. ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿವೆ. ಮುಂಜಾಗ್ರತ ಕ್ರಮವಾಗಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಔಷಧಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.

ಮಹಮದ್​ ನಗರ, ಕವಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ನದಿಯಲ್ಲಿ ನೀರು ಹೆಚ್ಚಾದಲ್ಲಿ ವಿದ್ಯುತ್​ ಸಮಸ್ಯೆ ಆಗಲಿದೆ. ಸದ್ಯ ಪ್ರವಾಹ ಇಳಿಕೆಯಾಗಿದ್ದು ಸಮಸ್ಯೆ ಉಲ್ಬಣಿಸಿಲ್ಲ. ಆದರೆ, ಈ ಗ್ರಾಮಗಳಲ್ಲಿ ಕುಡಿವ ನೀರು ಸಮಸ್ಯೆ ಸಾಮಾನ್ಯವಾಗಿದ್ದು, ಕಳೆದ ಬೇಸಿಗೆಯಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಸಲಾಗಿದೆ. ಗ್ರಾಮೀಣ ಪ್ರದೇಶದ ಬಹುತೇಜ ಗ್ರಾಮಗಳಲ್ಲಿ ಕುಡಿಯಲು ಬಹುಪಾಲು ಬೋರ್​ವೆಲ್​ ನೀರು ಪೂರೈಸಲಾಗುತ್ತಿದೆ. ಬನ್ನಿಕೊಪ್ಪ ಜಾಕ್​ವೆಲ್​ನಿಂದ ಕುಕನೂರು, ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಮಳೆ ಬಂದಾಗಲಷ್ಟೇ ವಿದ್ಯುತ್​ ಸಮಸ್ಯೆ ಇದ್ದು ಉಳಿದಂತೆ ಅಷ್ಟಾಗಿ ಕಡಿತ ಮಾಡುತ್ತಿಲ್ಲ.

ಬೂದು ಬಣ್ಣಕ್ಕೆ ತಿರುಗಿದ ನೀರು
ಕೊಪ್ಪಳ, ಗಂಗಾವತಿ ನಗರಗಳಿಗೆ ತುಂಗಭದ್ರಾ ನದಿ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ನಗರಸಭೆಯಿಂದ ಪೂರೈಕೆಯಾಗುವ ನೀರು ಬೂದು ಬಣ್ಣಕ್ಕೆ ತಿರುಗಿದೆ. ಸಿಂದೋಗಿ ರಸ್ತೆಯಲ್ಲಿ ಶುದ್ಧೀಕರಣ ಟಕವಿದ್ದು, ಅಲ್ಲಿಂದಲೇ ನೀರು ಒದಗಿಸಲಾಗುತ್ತಿದೆ. ಮಳೆಗಾಲ ಆರಂಭದಿಂದ ಬರುತ್ತಿರುವ ನೀರು ಮೊದಲಿನಷ್ಟು ಶುದ್ಧವಾಗಿಲ್ಲ. ಬೂದು, ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದೆ. ಇದೇ ನೀರು ಸೇವಿಸಿದವರಿಗೆ ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಮಳೆಗಾಲವಿದ್ದು, ನೀರಿನ ಮೂಲಗಳಿಗೆ ಹೊಸ ನೀರು ಸೇರುವುದರಿಂದ ಶೀತ, ಕೆಮ್ಮು, ಹೊಟ್ಟೆ ನೋವು ಸಾಮಾನ್ಯ. ನೀರು ಶುದ್ಧೀಕರಿಸಿ ಸೇವಿಸಬೇಕೆಂಬುದು ವೈದ್ಯರ ಸಲಹೆ.

ನಿಲ್ಲದ ಡೆಂಘೆ ಆರ್ಭಟ
ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಮಳೆ ಇಲ್ಲದಂತಾಗಿದೆ. ನೀರಾವರಿ ಭಾಗದಲ್ಲಿ ಜಲಾಶಯ ನೀರು ಪೂರೈಕೆಯಾದರೆ, ಒಣ ಬೇಸಾಯ ಭಾಗದ ಜನರು ಮಳೆ ಬರುವುದನ್ನೇ ಕಾಯುತ್ತಿದ್ದಾರೆ. ಸಾಂಕ್ರಾಮಿಕ ರೋಗ ಭೀತಿ ಅಷ್ಟಾಗಿ ಇಲ್ಲವಾದರೂ ಡೆಂಘೆ ಹಾವಳಿ ಮುಂದುವರೆದಿದೆ. ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಮಂಗಳವಾರದ ಅಂತ್ಯಕ್ಕೆ 157 ಪ್ರಕರಣಗಳು ದೃಢಪಟ್ಟಿವೆ. ಕೊಪ್ಪಳ ತಾಲೂಕಿನಲ್ಲಿ 57, ಯಲಬುರ್ಗಾ 43, ಗಂಗಾವತಿ 37 ಹಾಗೂ ಕುಷ್ಟಗಿ ತಾಲೂಕಿನಲ್ಲಿ 12 ಪ್ರಕರಣಗಳು ದೃಢಪಟ್ಟಿವೆ. ಮಾದರಿ ಸಂಗ್ರಹ ಹಾಗೂ ಪರೀಾ ಕಾರ್ಯ ಹೆಚ್ಚಿಸಿದ್ದು, ಸೊಳ್ಳೆ ಹಾಗೂ ಲಾರ್ವಾ ನಿವಾರಣೆಗೆ ಪರಿಣಾಮಕಾರಿ ಕ್ರಮ ಅಗತ್ಯವಿದೆ.

ನದಿಗೆ ನೀರು ಬಿಟ್ಟಿರುವುದರಿಂದ ನೀರಿನ ಮೂಲಕ ವಿಷ ಜಂತುಗಳು ಬರುವುದು ಸಾಮಾನ್ಯ. ಮಳೆಗಾಲದಲ್ಲಿ ಸಹಜವಾಗಿ ಹಾವುಗಳ ಸಂಚಾರ ಹೆಚ್ಚಲಿದೆ. ಹಾಡು ಕಡಿತದ ಪ್ರಕರಣಗಳು ವರದಿಯಾಗುತ್ತಿವೆ. ಮುಂಜಾಗ್ರತೆಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಡಿದು ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಸಂಗ್ರಹಿಸಲಾಗಿದೆ. ವಾಂತಿ&ಭೇದಿ ಪ್ರಕರಣಗಳಲ್ಲಿ ಬೇಕಾಗುವ ಔಷಧವೂ ಲಭ್ಯವಿದೆ. ಡೆಂಘೆ ನಿಯಂತ್ರಣ ಮಾಡಲಾಗುತ್ತಿದೆ. ಡಾ.ಟಿ.ಲಿಂಗರಾಜು. ಡಿಎಚ್​ಒ ಕೊಪ್ಪಳ.

ಡಾ.ಟಿ.ಲಿಂಗರಾಜು. ಡಿಎಚ್​ಒ ಕೊಪ್ಪಳ.

ನಾವು ನಗರಸಭೆಯಿಂದ ಪೂರೈಕೆಯಾಗುವ ಕುಡಿವ ನೀರನ್ನೇ ಸೇವಿಸುತ್ತೇವೆ. ಇತ್ತೀಚೆಗೆ ಶುದ್ಧ ನೀರು ಬರುತ್ತಿಲ್ಲ. ಬದಲಿಗೆ ಬೂದು, ಕೆಂಪು ಬಣ್ಣದ ನೀರು ಪುರೈಕೆಯಾಗುತ್ತಿದೆ. ಶುದ್ಧೀಕರಣ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಪೂರ್ತಿ ಶುದ್ಧೀಕರಿಸಿ ಬಿಡಬೇಕು. ಮಹಾದೇವಿ. ನಿವಾಸಿ ಕೊಪ್ಪಳ.

ಮಹಾದೇವಿ. ನಿವಾಸಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net