ಮೊದಲ ದಿನ 173 ಜನರಿಗೆ ಕರೊನಾ ಲಸಿಕೆ

160121 Koppal Corona Vaccine First Day
Published on

ಕೊಪ್ಪಳ: ಕರೊನಾ ಸೋಂಕು ತಡೆಗೆ ಲಸಿಕಾ ಅಭಿಯಾನ ಆರಂಭಿಸಿದ್ದು, ಶನಿವಾರ ಜಿಲ್ಲೆಯ 4 ಕೇಂದ್ರಗಳಲ್ಲಿ 173 ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಯಿತು.

ದೇಶಾದ್ಯಂತ ಲಸಿಕೆ ಅಭಿಯಾನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಅವರ ಭಾಷಣದ ಲೈವ್ ಕಾರ್ಯಕ್ರಮವನ್ನು ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು. ಬಳಿಕ ಲಸಿಕೆ ನೀಡುವ ಕಾರ್ಯ ನಡೆಯಿತು. ಕಿಮ್ಸ್ ಡಿ ಗ್ರೂಪ್ ನೌಕರ ಬಸವರಾಜ ಬಿ.ಎಲ್.ಎಂಬುವರಿಗೆ ಮೊದಲ ಡೋಸ್ ನೀಡಲಾಯಿತು. ಈ ವೇಳೆ ಬಸವರಾಜ ಹೆಗಲ ಮೇಲೆ ಕೈ ಹಾಕಿ ಹೆದರದಂತೆ ಸಂಸದ ಸಂಗಣ್ಣ ಧೈರ್ಯ ತುಂಬಿದರು. ಲಸಿಕೆ ಪಡೆದ ನಂತರ ಹೂ ನೀಡಿ ಅಭಿನಂದಿಸಿದರು.

ಲಸಿಕೆ ನೀಡಿಕೆ ಬಳಿಕ ಬಸವರಾಜಗೆ ಥರ್ಮಲ್ ಸ್ಕ್ರೀನಿಂಗ್, ರಕ್ತದೊತ್ತಡ ಸೇರಿ ಇತರ ಮುಂಜಾಗ್ರತಾ ಪರೀಕ್ಷೆ ಮಾಡಲಾಯಿತು. ಕೆಲ ಸಮಯ ಆಸ್ಪತ್ರೆಯಲ್ಲಿಟ್ಟುಕೊಂಡು ಆರೋಗ್ಯದ ಮೇಲೆ ನಿಗಾವಹಿಸಲಾಯಿತು. ನಂತರ ಜಿಲ್ಲಾ ಬೋಧಕ ಆಸ್ಪತ್ರೆಯ ಇನ್ನೋರ್ವ ಸಿಬ್ಬಂದಿ ಆಶಾಬಿ, ನರ್ಸಿಂಗ್ ವಿಭಾಗದ ಬಾಳಜ್ಜ ಹಾಗೂ ದೀಪಾ ಸೋಂಪುರ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣಕುಮಾರ ಹೊಳಿಯಾಚಿ, ದಂತ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಲಸಿಕೆ ಪಡೆದರು. ಸದ್ಯ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, 30 ತಂಡಗಳನ್ನು ರಚಿಸಲಾಗಿದೆ. ದಿನವೊಂದಕ್ಕೆ 1 ಕೇಂದ್ರದಲ್ಲಿ ನೂರು ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಡಿಎಚ್‌ಒ ಟಿ.ಲಿಂಗರಾಜು ತಿಳಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಜಿಪಂ ಉಪಾಧ್ಯಕ್ಷೆ ಬೀನಾ ಗೌಸ್, ತಾಪಂ ಅಧ್ಯಕ್ಷ ಬಾಲಚಂದ್ರನ್, ಡಿಸಿ ಎಸ್.ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ, ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಪಾಟೀಲ್ ಇಟಗಿ ಇತರರಿದ್ದರು.

ದೇಶದ ಜನಸಂಖ್ಯೆಗಿಂತ ಹೆಚ್ಚುವರಿ 30 ಕೋಟಿ ಲಸಿಕೆ ಉತ್ಪಾದಿಸಲಾಗಿದೆ. ಈ ಮೂಲಕ ಕರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇತರ ದೇಶಗಳಿಗೂ ಲಿಸಿಕೆ ಪೂರೈಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.| ಸಂಗಣ್ಣ ಕರಡಿ ಕೊಪ್ಪಳ ಸಂಸದ==========ಕರೊನಾ ಲಸಿಕೆ ನೀಡಿಕೆ ಆರಂಭಿಸಲಾಗಿದೆ. ಆದಷ್ಟು ಬೇಗನೆ ಎಲ್ಲರಿಗೂ ಉಚಿತವಾಗಿ ಲಸಿಕೆ ತಲುಪುವಂತಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ಕೈಗೊಳ್ಳಲಿ. ಕರೊನಾದಿಂದ ಎಲ್ಲರೂ ಸಂಕಷ್ಟಕ್ಕೀಡಾಗಿದ್ದು, ಇದರಿಂದ ಮುಕ್ತಿ ದೊರೆಯುವಂತಾಗಲಿ.| ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net