ವಿಶ್ವರೂಪಿಣಿ  ಹುಲಿಗೆಮ್ಮ ಚಿತ್ರೀಕರಣಕ್ಕೆ ಮುಹೂರ್ತ
ನಟಿ ಪ್ರಿಯಾಂಕಾ ಉಪೇಂದ್ರ ಭಾಗಿ

IMG-20220809-WA0011.jpg
Published on

ಕೊಪ್ಪಳ: ತಾಲೂಕಿನ ಹುಲಿಗಿ ಹುಲಿಗೆಮ್ಮದೇವಿ ಸನ್ನಿಧಿಯಲ್ಲಿ  'ವಿಶ್ವರೂಪಿಣಿ ಹುಲಿಗೆಮ್ಮ' ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಮಂಗಳವಾರ ಮುಹೂರ್ತ ನೆವೇರಿಸುವ ಮೂಲಕ ಚಿತ್ರೀಕರಣ‌‌ಕ್ಕೆ ಚಾಲನೆ ನೀಡಿತು.


ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 25 ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ಶಕ್ತಿ ದೇವತೆ ಹುಲಿಗೆಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹೊಸಪೇಟೆ ಬಿಜೆಪಿ ನಾಯಕಿ ಕವಿತಾ ಸಿಂಗ್ ಮುಹೂರ್ತಕ್ಕೆ ಚಾಲನೆ ನೀಡಿದರು.


ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ,  ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ನಾನು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ಬಹುತೇಕ ಚಿತ್ರಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರವು ಶಕ್ತಿ ದೇವತೆ ಹುಲಿಗೆಮ್ಮ ದೇವಿಯ ಮಹಾತ್ಮೆ ಸಾರುವ ಭಕ್ತಿಪೂರ್ವಕ ಚಿತ್ರ. ಅನುಭವಿ ಕಲಾವಿದರ ತಂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವೂ ಕೂಡ ನನ್ನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಕನ್ನಡಿಗರು ಚಿತ್ರವನ್ನು ಯಶಸ್ವಿಗೊಳಿಸುತ್ತಾರೆ ಎಂಬ ಭರವಸೆ ಇದೆ ಎಂದರು.


ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, "ನಾನು ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಇಪ್ಪತೈದು ವರ್ಷಗಳು ಕಳೆದಿವೆ. ಆದರೆ, ಭಕ್ತಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ನಟನೆ ಸವಾಲು‌ ಎನಿಸುತ್ತಿದೆ. ವಿವಿಧ ಕಥೆಗಳನ್ನೊಳಗೊಂಡ ಹಲವು ಚಿತ್ರಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆದರೆ ಇದು ವಿಭಿನ್ನ ಪಾತ್ರವನ್ನೊಳಗೊಂಡ ಚಿತ್ರವಾಗಿದೆ. ಕನ್ನಡಿಗರು ಈ ಚಿತ್ರವನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತಾರೆ ಎಂಬ ಕುತೂಹಲ ಇದೆ. ತಾಯಿ ಹುಲಿಗೆಮ್ಮದೇವಿಯ ಆಶೀರ್ವಾದದಿಂದ ಚಿತ್ರ ಯಶಸ್ವಿಗೊಳ್ಳುತ್ತದೆ ಎಂಬ ನಂಬಿಕೆ ಇದೆ" ಎಂದರು. ನಟಿಯನ್ನು ಕಾಣಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net