

ಕೊಪ್ಪಳ: ಜಿಲ್ಲೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್‌ಆಸ್ತಿ ಎಂದು ನಮೂದಾಗಿದ್ದಲ್ಲಿ ನಮ್ಮ ಗಮನಕ್ಕೆ ತನ್ನಿ. ಅದರ ವಿರುದ್ಧ ನಾವು ಹೋರಾಡುತ್ತೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಯ ರೈತರ ಆಸ್ತಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ಅಂಥವರಿಗಾಗಿ ಬಿಜೆಪಿ ರೈತ ಸಹಾಯವಾಣಿ ಆರಂಭಿಸಿದೆ. ಮೊ.ನಂ. 9164324861 ಗೆ ಕರೆ ಮಾಡಿದಲ್ಲಿ ಪಕ್ಷ ನೆರವಿಗೆ ಬರಲಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಅಧಿಕಾರಿಗಳು ರೈತರಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟಿರಬಹುದು. ಕೇವಲ ಹಿಂದು ರೈತರಲ್ಲ, ಮುಸ್ಲಿಮ್ ರೈತರ ಪಹಣಿಗಳಲ್ಲೂ ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ನ.4ಂದು ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.
ಉಪಚುನಾವಣೆ ಕಾರಣ ಹೋರಾಟ ಕೈಗೆತ್ತಿಕೊಂಡಿಲ್ಲ. ನಾನು ಸಿಎಂ ಆಗುವೆ ಎನ್ನುವ ದಿವಾಳಿ ಸರ್ಕಾರದ ದಿವಾನ ಬಸವರಾಜ ರಾಯರಡ್ಡಿ ಈ ಬಗ್ಗೆ ಮಾತನಾಡಲಿ, ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್ ರೈತರ ಪಹಣಿಯಲ್ಲಿನ ವಕ್ಫ್ ಆಸ್ತಿ ಎಂಬ ಅಂಶ ಡಿಲೀಟ್ ಮಾಡಿಸಿದ್ದಾರೆ. ಅವರೂ ಸಿಎಂ ಸ್ಥಾನದ ಆಕಾಂಕ್ಷಿ. ಅವರಂತೆ ಇವರೂ ಬದ್ಧತೆಯಿಂದ ಕೆಲಸ ಮಾಡಲಿ. ರಾಯರಡ್ಡಿ, ಸಚಿವ ತಂಗಡಗಿ, ಸಿಎಂ ಆಪ್ತರೆಂದು ಹೇಳಿಕೊಳ್ಳುವ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ? ಸಿಎಂ ಬಳಿ ಪ್ರಶ್ನಿವ ಎದೆಗಾರಿಕೆ ಯಾಕೆ ತೋರುತ್ತಿಲ್ಲ. ಅಷ್ಟು ಎದೆಗಾರಿಕೆ ಇಲ್ಲದಿದ್ದರೆ ನಮ್ಮ ಹೋರಾಟಕ್ಕೆ ನೈತಿಕ ಬೆಂಬಲ ಕೊಡಲಿ ಎಂದರು. ಪ್ರಮುಖರಾದ ರಾಜು ಬಾಕಳೆ, ಡಿ. ಮಲ್ಲಣ್ಣ ಇತರರಿದ್ದರು.