

ಕೊಪ್ಪಳ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ಕೊಪ್ಪಳದಲ್ಲಿ ಕರೊನಾ ಸೋಂಕಿತ ವಿದ್ಯಾರ್ಥಿ ಏಕಾಂಗಿಯಾಗಿ ಪರೀಕ್ಷೆ ಬರೆದಿದ್ದಾನೆ. ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಮದ ವಿದ್ಯಾರ್ಥಿ,
ಇಟಗಿ ಆದರ್ಶ ವಿದ್ಯಾಲಯದ ಪರೀಕ್ಷಾ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಬೇಕಿತ್ತು. ಆದರೆ, ಹುಷಾರಿಲ್ಲದ ಕಾರಣ ಶನಿವಾರ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಭಾನುವಾರ ಸಂಜೆ ಸೋಂಕು ದೃಢಪಟ್ಟಿದೆ. ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಸೌಮ್ಯ ರೋಗ ಲಕ್ಷಣ ಇರುವ ಕಾರಣ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ. ನೋಡಲ್ ಅಧಿಕಾರಿಯಾಗಿ ವೀರಣ್ಣ ಶ್ರೀರಡ್ಡಿ, ಮೇಲ್ವಿಚಾರಕ ಮಾಲತೇಶ ತೋಟಪ್ಪನವರ್ ಪರೀಕ್ಷೆ ಕಾರ್ಯ ನಡೆಸಿಕೊಟ್ಟರು.
ಕಾನಿಸ್ಟೇಬಲ್ ಮಾರುತಿ ಅಳ್ಳಪ್ಪನವರ್ ಭದ್ರೆತೆ ಒದಗಿಸಿದರು. ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ಶಾಲೆಯನ್ನು ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.